ನವದೆಹಲಿ: ಕೊರೊನಾ ಹೊಸ ತಳಿ ಒಮಿಕ್ರಾನ್ ದೇಶದಲ್ಲಿ ಆತಂಕ ಸೃಷ್ಟಿಸಿದೆ. ಈ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7,992 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,46,82,736 ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಸದ್ಯಕ್ಕೆ ದೇಶದಲ್ಲಿ 93,277 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಕಳೆದ 559 ದಿನಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ನಿನ್ನೆ ಬರೋಬ್ಬರಿ 393 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 4,75,128 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 9,265 ಮಂದಿ ಚೇತರಿಸಿಕೊಂಡಿದ್ದು, ಈವರೆಗೆ 3,41,14,331 ಜನ ಗುಣಮುಖರಾಗಿದ್ದಾರೆ. ಪ್ರಸ್ತುತ ಒಟ್ಟಾರೆ ಚೇತರಿಕೆ ದರ ಶೇ. 98.36 ರಷ್ಟಿದೆ.
ಕೋವಿಡ್ ರೂಪಾಂತರಿ ತಳಿ ಆತಂಕದ ಹಿನ್ನೆಲೆ ಲಸಿಕಾ ಅಭಿಯಾನ ಕಾರ್ಯ ಚುರುಕುಗೊಳಿಸಲಾಗಿದೆ. ಈವರೆಗೆ 131.99 ಕೋಟಿಗೂ ಅಧಿಕ ಲಸಿಕಾ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.