ನವದೆಹಲಿ: ಹೊಸದಾಗಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಓಮಿಕ್ರೋನ್ ವೈರಸ್ ಸುಮಾರು 30ಕ್ಕೂ ರೂಪಾಂತರಗಳನ್ನು ಹೊಂದಿದ್ದು, ಅದರ ಪ್ರೋಟೀನ್ ಕವಚ ಮನುಷ್ಯರ ರೋಗ ನಿರೋಧಕ ಶಕ್ತಿಯಿಂದ ಪಾರಾಗುವಂತೆ ಮಾಡುತ್ತದೆ. ಇದರಿಂದ ಕೋವಿಡ್ ವ್ಯಾಕ್ಸಿನ್ ಕೊರೊನಾದೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಕಠಿಣ ಪರೀಕ್ಷೆಗೆ ಒಳಪಡಿಸಬೇಕಾಗಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಓಮಿಕ್ರೋನ್ ರೂಪಾಂತರವು 30ಕ್ಕೂ ಹೆಚ್ಚು ರೂಪಾಂತರವನ್ನು ಹೊಂದಿದೆ. ಪ್ರೋಟೀನ್ ಕವಚ ಹೊಂದಿರುವುದರಿಂದ ಲಸಿಕೆಗಳ ಪ್ರಭಾವದಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭಾರತದಲ್ಲಿ ಬಳಸಲ್ಪಡುತ್ತಿರುವ ಲಸಿಕೆಗಳನ್ನು ಮತ್ತೊಮ್ಮೆ ಮೌಲ್ಯಮಾಪನ ಮಾಡಬೇಕಾಗುತ್ತದೆ ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಭಾರತದಲ್ಲಿ INSACOG ಅಂದರೆ ಇಂಡಿಯನ್ SARS-CoV-2 ಜೀನೋಮಿಕ್ ಕನ್ಸೋರ್ಟಿಯಾ ಹೊಸ ಓಮಿಕ್ರೋನ್ ರೂಪಾಂತರವನ್ನು ಟ್ರ್ಯಾಕ್ ಮಾಡುತ್ತಿದ್ದು, ಈವರೆಗೂ ದೇಶದಲ್ಲಿ ಈ ವೈರಸ್ ಪತ್ತೆಯಾಗಿಲ್ಲ ಎಂದು ರಂದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
Suggestions to Omicron control: ಓಮಿಕ್ರೋನ್ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಡಾ.ರಂದೀಪ್ ಗುಲೇರಿಯಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡಿವಾಣ ಹಾಕುವುದರ ಜೊತೆಗೆ ಮತ್ತು ಕೋವಿಡ್ ಪ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ಸಾಕಷ್ಟು ಜಾಗರೂಕತೆಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಎಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿ ಅನುಸರಿಸಲು ಮನವಿ ಮಾಡಬೇಕು. ಕೋವಿಡ್ ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಳ್ಳಬೇಕು. ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ಬರುವವರನ್ನು ಪ್ರೋತ್ಸಾಹಿಸಬೇಕು ಎಂದು ರಂದೀಪ್ ಗುಲೇರಿಯಾ ಹೇಳಿದ್ದಾರೆ.
Centre taking precautions on Omicron: ಆಫ್ರಿಕಾದ ದಕ್ಷಿಣ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಓಮಿಕ್ರೋನ್ ವೈರಸ್ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೂಡಾ ಕಾಣಿಸಿಕೊಳ್ಳುತ್ತಿದೆ. ಈಗ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಬೆಲ್ಜಿಯಂ, ಹಾಂಗ್ ಕಾಂಗ್, ಇಸ್ರೇಲ್, ನೆದರ್ಲ್ಯಾಂಡ್ನಲ್ಲಿ ಓಮಿಕ್ರೋನ್ ಕಾಣಿಸಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್ ಮತ್ತು ಬೋಟ್ಸ್ವಾನಾದಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಒಂದು ವೇಳೆ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಬಂದರೆ, ಅದು ಓಮಿಕ್ರೋನ್ ವೈರಸ್ ಹೌದೋ?, ಅಲ್ಲವೋ? ಎಂದು ತಿಳಿದುಕೊಳ್ಳಲು ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್ಗಳಿಗೆ ಕಳುಹಿಸಲು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಮೊಬೈಲ್ ಹುಚ್ಚ.. ಅತಿಯಾದ ಸೆಲ್ಫೋನ್ ಬಳಕೆಯಿಂದ ICU ಸೇರಿದ ಯುವಕ!