ಪುಣೆ/ಉದಯಪುರ :ಮಹಾರಾಷ್ಟ್ರ ಮತ್ತು ರಾಜಸ್ತಾನದಲ್ಲಿ ಇಬ್ಬರು ರೋಗಿಗಳು ಹೊಸ ರೂಪಾಂತರಿ ಒಮಿಕ್ರಾನ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಹೀಗಾಗಿ, ದೇಶದಲ್ಲಿ ಒಮಿಕ್ರಾನ್ ಮೊದಲೆರಡು ಬಲಿ ಪಡೆದಿದೆ ಎಂದು ಹೇಳಲಾಗಿದೆ.
ನೈಜೀರಿಯಾದಿಂದ ವಾಪಸ್ಸಾಗಿದ್ದ ಮಹಾರಾಷ್ಟ್ರದ 52 ವರ್ಷದ ವ್ಯಕ್ತಿಯೊಬ್ಬ ಡಿಸೆಂಬರ್ 28ರಂದು ಹೃದಯಾಘಾತದಿಂದ ಮೃತಪಟ್ಟಿದ್ದ. ಮರಣಾನಂತರ ಕೊರೊನಾ ಪರೀಕ್ಷೆ ವೇಳೆ ಆ ವ್ಯಕ್ತಿಯಲ್ಲಿ ಒಮಿಕ್ರಾನ್ ದೃಢಪಟ್ಟಿತ್ತು. ಇದು ಒಮಿಕ್ರಾನ್ನಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಎಂದು ಎಂದು ಹೇಳಲಾಗಿತ್ತು.
ಆದರೆ, ವೈದ್ಯರು ಇದು ಹೃದಯಾಘಾತದಿಂದ ಉಂಟಾದ ಸಾವು ಎಂದು ತಿಳಿಸಿದ್ದಾರೆ. ಈ ವ್ಯಕ್ತಿ ಕಳೆದ 13 ವರ್ಷಗಳಿಂದ ಮಧುಮೇಹ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹಾಗಾಗಿ, ಇದು ಅನಾರೋಗ್ಯ ಸಮಸ್ಯೆಯಿಂದಾದ ಸಾವು ಎಂದು ವೈದ್ಯರು ಪರಿಗಣಿಸಿದ್ದಾರೆ.
ರಾಜಸ್ತಾನದಲ್ಲಿ ಇಂದು(ಶುಕ್ರವಾರ) 73 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು, ಈತನಲ್ಲಿ ಒಮಿಕ್ರಾನ್ ದೃಢಪಟ್ಟಿತ್ತು. ಇಲ್ಲಿನ ಉದಯಪುರ ಸವಿನಾನಗರ ಪ್ರದೇಶದವರಾಗಿದ್ದ ಈ ವ್ಯಕ್ತಿ ಕಳೆದ 15 ದಿನಗಳಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಅನಾರೋಗ್ಯದ ನಿಮಿತ್ತ ದಾಖಲಾಗಿದ್ದರು.
ಡಿಸೆಂಬರ್ 25ರಂದು ಮಾಡಿದ ಕೊರೊನಾ ಪರೀಕ್ಷೆಯಲ್ಲಿ ಈ ವ್ಯಕ್ತಿಯಲ್ಲಿ ಒಮಿಕ್ರಾನ್ ಇರುವುದು ಕಂಡು ಬಂದಿತ್ತು. ಇಂದು ಬೆಳಗ್ಗೆ ಈ ವ್ಯಕ್ತಿ ಅಸುನೀಗಿದ್ದಾನೆ.
ಆದರೆ, ಮೃತ ವ್ಯಕ್ತಿ ನ್ಯುಮೋನಿಯಾ, ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದ. ಈ ಕಾರಣಕ್ಕಾಗಿ ಸಾವನ್ನಪ್ಪಿರಬಹುದು. ಒಮಿಕ್ರಾನ್ನಿಂದಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಕೊರೊನಾದಿಂದ ಗುಣಮುಖ.. ಒಮಿಕ್ರಾನ್ ವರದಿಯೂ ನೆಗೆಟಿವ್.. ಆಸ್ಪತ್ರೆಯಿಂದ ಗಂಗೂಲಿ ಡಿಸ್ಚಾರ್ಜ್