ಶ್ರೀನಗರ (ಜಮ್ಮು ಮತ್ತು ಕಾಶ್ಮೀರ):ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೇಮಕಾತಿ ಪರೀಕ್ಷೆಗಳ ವೇಳೆ ಶಿರವಸ್ತ್ರದ ಮೇಲಿನ ನಿರ್ಬಂಧವನ್ನು ತೆರವು ಮಾಡಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಮಂಗಳವಾರ ಕಾಂಗ್ರೆಸ್ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ.
ಆ ರಾಜ್ಯದಲ್ಲಿ ಈ ಹಿಂದೆ ಇಂತಹ ಆದೇಶಗಳನ್ನು ಹೊರಡಿಸಿದಾಗ ಅಚ್ಚರಿಯಾಗುತ್ತಿರಲಿಲ್ಲ. ಕಾರಣ ಅಲ್ಲಿ ಬೇರೆ ಸರ್ಕಾರ ಇತ್ತು. ಈಗ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹೊರಡಿಸಲಾಗಿರುವ ಆದೇಶಗಳನ್ನು ರದ್ದು ಮಾಡಬೇಕು. ಸರ್ಕಾರ ಇದರಲ್ಲಿ ಮಧ್ಯಪ್ರವೇಶ ಮಾಡಬೇಕು. ತಕ್ಷಣವೇ ಈ ಬಗ್ಗೆ ಹೊಸ ಆದೇಶ ಹೊರಡಿಸಲು ಸೂಚಿಸಿ ಎಂದು ಕೋರಿದ್ದಾರೆ.
ಆದೇಶ ಮರುಪರಿಶೀಲಿಸಿ:ಬಾರಾಮುಲ್ಲಾದಲ್ಲಿ ಪಕ್ಷದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ಅಧಿಕಾರವಿರುವ ರಾಜ್ಯದಲ್ಲಿ ಇಂತಹ ಆದೇಶಗಳು ಜಾರಿಗೆ ಬರುತ್ತಿರುವುದು ವಿಷಾದಕರ, ದುರದೃಷ್ಟಕರ ಸಂಗತಿ. ಕರ್ನಾಟಕದಲ್ಲಿ ಹೊರಡಿಸಿರುವ ಆದೇಶವನ್ನು ಮರುಪರಿಶೀಲಿಸಿ, ಹಿಂಪಡೆಯಲು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಕೋರುತ್ತೇನೆ ಎಂದರು.
ಕೇಂದ್ರಕ್ಕೆ ಚುನಾವಣೆ ನಡೆಸುವ ಉದ್ದೇಶವಿಲ್ಲ:ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುವ ಕುರಿತ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ, ಬಿಜೆಪಿ ಇಲ್ಲಿನ ಜನರನ್ನು ಎದುರಿಸಲು ಸಿದ್ಧವಿಲ್ಲ. ವಿಧಾನಸಭೆ ಚುನಾವಣೆ ಬಿಡಿ, ಮುನ್ಸಿಪಲ್ ಚುನಾವಣೆಯೂ ಮುಂದೂಡಲ್ಪಟ್ಟಿದೆ. ಶ್ರೀನಗರದಲ್ಲಿನ ಪುರಸಭೆ ಈಗ ಅಸ್ತಿತ್ವದಲ್ಲಿಲ್ಲ. ಜಮ್ಮು ಪುರಸಭೆ ಅವಧಿಯೂ ಮುಗಿಯುತ್ತಿದೆ. ಜನವರಿ ವೇಳೆಗೆ ಎಲ್ಲ ಪುರಸಭೆಗಳ ಅವಧಿ ಮುಗಿಯುತ್ತದೆ. ನಂತರ ಪಂಚ ಮತ್ತು ಸರಪಂಚ್‌ಗಳು ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಒಂದಲ್ಲ, ಮೂರು ಹಂತದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈಗ ಅದರಲ್ಲಿ ಒಂದು ಹಂತವೂ ಉಳಿದಿಲ್ಲ. ಅವರು ಇಲ್ಲಿ ಚುನಾವಣೆ ನಡೆಸಲು ಸಿದ್ಧರಿಲ್ಲ. ಲೋಕಸಭೆ ಚುನಾವಣೆಯೇ ಅವರ ಮುಖ್ಯ ಗುರಿಯಾಗಿದೆ. ಕಾಶ್ಮೀರದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಅವರಿಗೆ ಒಲವು ಇಲ್ಲ ಎಂದು ಅವರು ಹೇಳಿದರು.
ಏನಿದು ಶಿರವಸ್ತ್ರ ನಿಷೇಧ ಕೇಸ್:ಕರ್ನಾಟಕದ ಉಡುಪಿಯ ಕಾಲೇಜಿನಲ್ಲಿ ಮೊದಲು ಸದ್ದು ಮಾಡಿದ ಶಿರವಸ್ತ್ರ ಗದ್ದಲ ಬಳಿಕ ದೇಶ, ವಿಶ್ವಕ್ಕೇ ಪಸರಿಸಿತು. ಕಾಲೇಜಿನೊಳಗೆ ಮುಸ್ಲಿಂ ಯುವತಿಯರು ಸ್ಕಾರ್ಪ್ ಧರಿಸುವುದಕ್ಕೆ ವಿರೋಧ ವ್ಯಕ್ತವಾಯಿತು. ರಾಜ್ಯ ಸರ್ಕಾರ ಶಾಲಾ ವಸ್ತ್ರಸಂಹಿತೆ ಜಾರಿ ಮಾಡಿ ಇದನ್ನು ನಿಷೇಧಿಸಿತ್ತು. ಈ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿಯಿತು.
ಇದನ್ನೂ ಓದಿ:ಯುದ್ಧಪೀಡಿತ ಗಾಜಾದಿಂದ ಕಾಶ್ಮೀರಿ ಮಹಿಳೆ, ಮಗು ರಕ್ಷಣೆ: ಸುರಕ್ಷಿತವಾಗಿ ಈಜಿಪ್ಟ್ಗೆ ಕರೆದೊಯ್ದ ಭಾರತೀಯ ಸಂಸ್ಥೆಗಳು