ನಾಗೌರ್ (ರಾಜಸ್ಥಾನ): ನಾನೀಗ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯನಿದ್ದೇನೆ. ಯಾವುದೇ ಅಭ್ಯರ್ಥಿಗಳ ಪಟ್ಟಿ ಕಳುಹಿಸಿದರೂ ನಾನೇ ಅದನ್ನು ನೋಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ನಾನು ಹಜ್ಜೆ ಮುಂದಿಟ್ಟರೆ, ಪ್ರಧಾನಿ ಮೋದಿ ಕೂಡ ಅದನ್ನು ನಿರಾಕರಿಸಲು ಸಾಧ್ಯವಿಲ್ಲ.!
ಹೀಗೆ ಹೇಳಿದ್ದು ರಾಜ್ಯಸಭಾ ಮಾಜಿ ಸಂಸದ ಹಾಗೂ ಬಿಜೆಪಿಯ ಹಿರಿಯ ನಾಯಕ ಓಂ ಮಾಥೂರ್. ಈ ಹೇಳಿಕೆಯಿಂದ ಬಗ್ಗೆ ಬಿಜೆಪಿ ಕಾರ್ಯಕರ್ತರೇ ಗೊಂದಲಕ್ಕೀಡಾಗಿದ್ದಲ್ಲದೇ, ಪಕ್ಷದಲ್ಲೇ ವಿರೋಧಕ್ಕೂ ಕಾರಣವಾಗಿದೆ.
ರಾಜಸ್ಥಾನದ ನಾಗೌರ್ನಲ್ಲಿ ಜನಾಕ್ರೋಶ ರ‍್ಯಾಲಿ ಉದ್ದೇಶಿಸಿ ಭಾಷಣ ಮಾಡಿದ ಅವರು, ಯಾರೂ ತಪ್ಪು ತಿಳಿದುಕೊಳ್ಳಬೇಡಿ. ನಾನು ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯ ಸದಸ್ಯ. ಜೈಪುರ ಜನತೆಯ ಯಾವುದೇ ಅಭ್ಯರ್ಥಿಯನ್ನು ಪಟ್ಟಿಯನ್ನು ಕಳುಹಿಸಿದರೆ, ಅದರಲ್ಲಿರುವ ಪ್ರತಿಯೊಬ್ಬರ ಹೆಸರನ್ನೂ ನಾನೇ ಪರಿಶೀಲನೆ ನಡೆಸುತ್ತೇನೆ. ನಾನು ನಿರ್ಧಾರ ಮಾಡಿದರೆ, ಯಾರೂ ಸಹ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೆಸರನ್ನೂ ಉಲ್ಲೇಖಿಸಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ನಾನು ಮುಖ್ಯಮಂತ್ರಿ ಅಭ್ಯರ್ಥಿಯ ರೇಸ್ನಲ್ಲಿಲ್ಲ. ರಾಜಸ್ಥಾನ ಸಿಎಂ ಅಭ್ಯರ್ಥಿಯನ್ನು ಕೇಂದ್ರ ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂದು ಓಂ ಮಾಥೂರ್ ಹೇಳಿದ್ದಾರೆ. ಇನ್ನು, ರಾಜಸ್ಥಾನ ಬಿಜೆಪಿಯ ರಾಜಕೀಯ ಸೂಕ್ಷ್ಮವಾಗಿ ಗಮನಿಸಿದರೆ ಓಂ ಮಾಥುರ್ ಅವರನ್ನು ಮಾಜಿ ಸಿಎಂ ವಸುಂಧರಾ ರಾಜೇ ಅವರ ಕಟ್ಟಾ ವಿರೋಧಿ ಎಂದು ಪರಿಗಣಿಸಲಾಗಿದೆ. ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಗೆ ಆಯ್ಕೆಯಾದ ನಂತರದಿಂದಲೂ ಓಂ ಮಾಥೂರ್ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎನ್ನಲಾಗಿದ್ದು, ರಾಜ್ಯ ಬಿಜೆಪಿಯಲ್ಲೇ ಅಸಮಾಧಾನ ಭುಗಿಲೆದ್ದಿದೆ.
ಇದನ್ನೂ ಓದಿ:ಚಂದ್ರಬಾಬು ನಾಯ್ಡು ಬಹಿರಂಗ ಸಭೆಯಲ್ಲಿ ಭಾರಿ ದುರಂತ: ಕಾಲ್ತುಳಿತಕ್ಕೆ 7 ಜನರು ಸಾವು