ನವದೆಹಲಿ:ಭಾರತದ ವ್ರೆಸ್ಲಿಂಗ್ ಫೆಡರೇಶನ್ (ಡಬ್ಲ್ಯುಎಫ್‌ಐ) ಹೊಸ ಮುಖ್ಯಸ್ಥ ಸಂಜಯ್ ಸಿಂಗ್ ಅವರ ಆಯ್ಕೆಗೆ ಕುಸ್ತಿಪಟುಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಒಲಿಂಪಿಯನ್ ಸಾಕ್ಷಿ ಮಲಿಕ್ ಕುಸ್ತಿಗೆ ನಿವೃತ್ತಿ ಘೋಷಿಸಿದ ಒಂದು ದಿನದ ನಂತರ ತಾರಾ ಕುಸ್ತಿಪಟು ಬಜರಂಗ್ ಪೂನಿಯಾ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀಯನ್ನು ಹಿಂದಿರುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. "ನಾನು ನನ್ನ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಮಂತ್ರಿ (ನರೇಂದ್ರ ಮೋದಿ) ಅವರಿಗೆ ಹಿಂದಿರುಗಿಸುತ್ತಿದ್ದೇನೆ. ಅದನ್ನು ಹೇಳಲು ಇದು ನನ್ನ ಪತ್ರ" ಎಂದು ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸಂಜಯ್ ಸಿಂಗ್ ಅವರು ಅನಿತಾ ಶೆರಾನ್ ಅವರನ್ನು ಸೋಲಿಸಿ ಗೆಲುವು ದಾಖಲಿಸಿದ್ದಾರೆ. ಸಂಜಯ್ ಸಿಂಗ್ ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತರಲ್ಲಿ ಒಬ್ಬರು. ಈ ಬೆಳವಣಿಗೆಯ ನಂತರ ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ನಿರಾಶೆ ವ್ಯಕ್ತಪಡಿಸಿದ್ದರು. ಒಲಿಂಪಿಕ್ ಕ್ರೀಡೆಯನ್ನು ತ್ಯಜಿಸುವುದಾಗಿಯೂ ಸಾಕ್ಷಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಪ್ರಧಾನಿ ಮೋದಿ ಅವರನ್ನು ಉಲ್ಲೇಖಿಸಿ ಬರೆದ ಪತ್ರದಲ್ಲಿ, "2019ರಲ್ಲಿ ನನಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು. ಅಲ್ಲದೆ ಖೇಲ್ ರತ್ನ ಮತ್ತು ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನನಗೆ ಈ ಗೌರವ ಸಿಕ್ಕಾಗ ತುಂಬಾ ಖುಷಿಯಾಗಿತ್ತು. ಜೀವನ ಯಶಸ್ವಿಯಾಗಿದೆ ಎಂದುಕೊಂಡಿದ್ದೆ. ಆದರೆ ಇಂದು ನಾನು ಅದಕ್ಕಿಂತ ಹೆಚ್ಚು ಅತೃಪ್ತಿ ಹೊಂದಿದ್ದೇನೆ. ಈ ಗೌರವಗಳು ನನ್ನನ್ನು ನೋಯಿಸುತ್ತಿವೆ."