ತಿರುವನಂತಪುರಂ (ಕೇರಳ): 96ನೇ ವಯಸ್ಸಿನಲ್ಲಿ ಕೇರಳದ ಸಾಕ್ಷರತಾ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದ, ನಾರಿಶಕ್ತಿ ಪುರಸ್ಕೃತ ಕಾರ್ತ್ಯಾಯನಿ ಅಮ್ಮ ಅವರು ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ 101 ವರ್ಷ ವಯಸ್ಸಾಗಿತ್ತು.
ಕಾರ್ತ್ಯಾಯನಿ ಅಮ್ಮ ಆಳಪ್ಪುಳ ಜಿಲ್ಲೆಯ ಚೆಪ್ಪಾಡ್ನ ಮಟ್ಟಂನಲ್ಲಿ ಜನಿಸಿದರು. ಮೊದಲಿನಿಂದಲೂ ಓದಿನ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಈ ಹಿನ್ನಲೆ ತಮ್ಮ ಮಗಳಿಂದ ಪ್ರೇರಣೆ ಪಡೆದ ಅವರು ತಮ್ಮ 96ನೇ ವಯಸ್ಸಿನಲ್ಲಿ ಕೇರಳ ಸರ್ಕಾರದ ಅಕ್ಷರ ಲಕ್ಷಂ ಯೋಜನೆಯಲ್ಲಿ ಸಾಕ್ಷರತಾ ಪರೀಕ್ಷೆಯನ್ನು ಬರೆದರು. ಸುಮಾರು 40 ಸಾವಿರ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದರು. ಇದರಲ್ಲಿ ಶೇ. 98 ಅಂಕಗಳನ್ನು ಪಡೆಯುವ ಕಾರ್ತ್ಯಾಯನಿ ಅಮ್ಮ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಕಾರ್ತ್ಯಾಯಿನಿ ಅಮ್ಮ ದೇಶಾದ್ಯಂತ ಪ್ರಸಿದ್ಧಿ ಪಡೆದರು.
96ನೇ ವಯಸ್ಸಿಗೆ ಸಾಕ್ಷರತಾ ಪರೀಕ್ಷೆ ಬರೆದಿದ್ದ ಅಮ್ಮ : ಸಾಕ್ಷರತಾ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಹಿನ್ನೆಲೆ 2018ರಲ್ಲಿ ಕಾತ್ಯಾಯನಿ ಅಮ್ಮಗೆ ಕೇಂದ್ರ ಸರ್ಕಾರವು ನಾರಿಶಕ್ತಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಬಳಿಕ ಇವರನ್ನು 53 ಸದಸ್ಯ ರಾಷ್ಟ್ರಗಳಲ್ಲಿ ದೂರ ಶಿಕ್ಷಣ ಪ್ರಚಾರಕ್ಕಾಗಿ ಕಾಮನ್ವೆಲ್ತ್ ಲರ್ನಿಂಗ್ನ ಸದ್ಭಾವನಾ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಯಿತು.
ತಮ್ಮ ಇಳಿ ವಯಸ್ಸಿನಲ್ಲೂ ಕಲಿಕೆ ಬಗ್ಗೆ ಒಲವನ್ನು ಹೊಂದಿದ್ದ ಅವರು, ಸಾಕ್ಷರತಾ ಮಿಷನ್ ಮೂಲಕ ಕಂಪ್ಯೂಟರ್ ಕಲಿಯಲು ಆಸೆ ವ್ಯಕ್ತಪಡಿಸಿದ್ದರು. ಈ ಸಂಬಂಧ ಮಾಜಿ ಶಿಕ್ಷಣ ಸಚಿವ ಪ್ರೊ. ಸಿ ರವೀಂದ್ರನಾಥ್ ಅವರು ಕಾರ್ತ್ಯಾಯನಿ ಅಮ್ಮ ಅವರ ಮನೆ ಭೇಟಿ ನೀಡಿ ಲ್ಯಾಪ್ಟಾಪ್ನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ 2018ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಕಾರ್ತ್ಯಾಯಿನಿ ಅಮ್ಮ ಅವರು ಸಾಧನೆಯನ್ನು ಪರಿಗಣಿಸಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸ್ತಬ್ಧಚಿತ್ರ ಪ್ರದರ್ಶಿಸಿ ಗೌರವ ಸೂಚಿಸಲಾಗಿತ್ತು.
ಸಿಎಂ ಪಿಣರಾಯಿ ವಿಜಯನ್ ಸಂತಾಪ : ಕಾರ್ತ್ಯಾಯನಿ ಅಮ್ಮ ನಿಧನಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಸಾಕ್ಷರತಾ ಮಿಷನ್ ಅಡಿ ನಡೆದ ಪರೀಕ್ಷೆಯಲ್ಲಿ ಕಾರ್ತ್ಯಾಯನಿ ಅಮ್ಮ ಅತಿ ಹೆಚ್ಚು ಅಂಕ ಪಡೆದಿದ್ದರು. ನಾಲ್ಕನೇ ತರಗತಿ ಓದುತ್ತಿದ್ದಾಗ ಅವರಿಗೆ ನಾರಿಶಕ್ತಿ ಪ್ರಶಸ್ತಿ ಅರಸಿ ಬಂದಿತ್ತು. ಅವರನ್ನು ಭೇಟಿ ಮಾಡಿದಾಗ ತಮ್ಮ ಓದುವ ಒಲವನ್ನು ವ್ಯಕ್ತಪಡಿಸಿದ್ದರು. ಈ ಮೂಲಕ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದರು. ಕಾರ್ತ್ಯಾಯನಿ ಅಮ್ಮ ಕೇರಳದ ಹೆಮ್ಮೆ. ನಾವು ಆದರ್ಶಪ್ರಾಯ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಅಲ್ಲದೆ ಇತರ ರಾಜಕೀಯ ನಾಯಕರು ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ :ಜಾತಿ ತಾರತಮ್ಯ, ಲೈಂಗಿಕ ಕಿರುಕುಳದಿಂದ ಬೇಸತ್ತು ಪುದುಚೇರಿ ಮಹಿಳಾ ಸಚಿವೆ ರಾಜೀನಾಮೆ!