ರೇವಾ (ಮಧ್ಯಪ್ರದೇಶ):108 ಸಮಸ್ಯೆಗಳು ತೀರುವ ಲಕ್ಷಣಗಳೇ ಕಾಣುತ್ತಿಲ್ಲ. ಏನಾದರೊಂದು ವಿವಾದಕ್ಕೆ ಆಂಬ್ಯುಲೆನ್ಸ್ ಸೇವೆ ಸಿಲುಕುತ್ತಲೇ ಇರುತ್ತದೆ. ಮಧ್ಯಪ್ರದೇಶದ ರೇವಾದಲ್ಲಿ ಜೀವರಕ್ಷಕ ವಾಹನ ಸಿಗದೇ ಅನಾರೋಗ್ಯಪೀಡಿತ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ವ್ಯಕ್ತಿಯೊಬ್ಬ ಕರೆದೊಯ್ದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದ ಆರೋಗ್ಯ ಸೇವೆಗೆ ಟೀಕೆ ವ್ಯಕ್ತವಾಗಿದೆ.
ಘಟನೆಯ ವಿವರ:ರೇವಾ ಜಿಲ್ಲೆಯ ಹನುಮಾನ ಎಂಬಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅನಾರೋಗ್ಯಕ್ಕೀಡಾದ ಪತ್ನಿಯನ್ನು 5 ಕಿ.ಮೀ ದೂರವಿರುವ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲು ವೃದ್ಧ ಪತಿ ಆಂಬ್ಯುಲೆನ್ಸ್ ಸೇವೆಯಾದ 108 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಆದರೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇದರಿಂದ ಬೇಸರಗೊಂಡ ವ್ಯಕ್ತಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ತಳ್ಳುವ ಗಾಡಿಯಲ್ಲಿ ಅನಾರೋಗ್ಯಕ್ಕೀಡಾದ ಮಹಿಳೆಯನ್ನು ಕರೆದುಕೊಂಡು ಬಂದಿದ್ದಾರೆ.
ಆಸ್ಪತ್ರೆಗೆ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ಸಾಗಿಸುತ್ತಿರುವ ಕರುಣಾಜನಕ ದೃಶ್ಯವನ್ನು ನೋಡಿದ ದಾರಿಹೋಕರೊಬ್ಬರು ಘಟನೆಯ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಅವಸರಕ್ಕಾಗದ ಆಂಬ್ಯುಲೆನ್ಸ್ ಸೇವೆಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಇದನ್ನು ಪ್ರಶ್ನಿಸಿ ಈಟಿವಿ ಭಾರತ್ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಿದಾಗ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರ ಅಲ್ಲಿನ ಸಿಬ್ಬಂದಿಯಿಂದ ಬಂದಿದೆ.
ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದ ಕಾರಣ ಅನಾರೋಗ್ಯಕ್ಕೀಡಾದ ವ್ಯಕ್ತಿಗಳನ್ನು ಸಂಬಂಧಿಕರು ತಳ್ಳುವಗಾಡಿ, ಬೈಕ್, ಇತರ ಸಾರಿಗೆ ವಿಧಾನಗಳ ಮೂಲಕ ಕರೆದೊಯ್ಯವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಆಂಬ್ಯುಲೆನ್ಸ್ ಸೇವೆಗಳು ಲಭ್ಯವಾಗದಿರುವುದು ಜನರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.