ಬರೇಲಿ: ಓಲಾ ಚಾಲಕನೊಬ್ಬ ಸಬ್ಇನ್ಸ್ಪೆಕ್ಟರ್ ಅಂತಾ ಹೇಳಿಕೊಂಡು ಮಹಿಳಾ ವಕೀಲರೊಬ್ಬರನ್ನು ಒಲಿಸಿಕೊಳ್ಳಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಲಕ್ನೋ ಮೂಲದ ಸತ್ಯಂ ತಿವಾರಿ ಬಂಧಿತ ಆರೋಪಿ. ಈ ಬಗ್ಗೆ ಮಹಿಳಾ ವಕೀಲರು ಪೊಲೀಸರಿಗೆ ದೂರು ನೀಡಿದ ನಂತರ ಗುರುವಾರ ಆರೋಪಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ವಕೀಲೆಯ ಜತೆ ನಕಲಿ ಎಸ್‌ಐ ಸ್ನೇಹ ಬೆಳೆಸಿದ್ದು, ಮದುವೆಯಾಗುವುದಾಗಿ ತಿಳಿಸಿದ್ದಾನೆ. ಬಳಿಕ ವಕೀಲೆ ಅವನನ್ನು ಭೇಟಿಯಾಗಲು ಬರೇಲಿಗೆ ಕರೆದಿದ್ದಾರೆ. ಎಸ್‌ಐ ಸಮವಸ್ತ್ರ ಧರಿಸಿ, ನಕಲಿ ಗುರುತಿನ ಚೀಟಿಯೊಂದಿಗೆ ಆಕೆಯನ್ನು ಭೇಟಿಯಾಗಲು ಬಂದಿದ್ದ ಸತ್ಯಂ, ಲಕ್ನೋದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡಿರುವುದಾಗಿ ಹೇಳಿದ್ದಾನೆ. ಈ ವೇಳೆ, ಮಹಿಳೆ ಆತನಿಗೆ ಕಾನೂನಿನ ವಿವಿಧ ಸೆಕ್ಷನ್‌ಗಳ ಬಗ್ಗೆ ಕೇಳಿದಾಗ ಆತ ಎಡವಿದ್ದು, ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.