ನವದೆಹಲಿ:ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲದರ ಬ್ಯಾರೆಲ್ಗೆ 87 ಡಾಲರ್ ಏರಿಕೆ ಕಂಡರೂ, ಕೇಂದ್ರ ಸರ್ಕಾರ ದೇಶದಲ್ಲಿ ಕಳೆದ 74 ದಿನದಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿಲ್ಲ. ಇದು ಎರಡನೇ ಅತಿ ದೀರ್ಘಾವಧಿಯ ದರ ಏರಿಕೆ ಮಾಡದ ಅವಧಿಯಾಗಿದೆ.
ಅರಬ್ನ ತೈಲ ಘಟಕದ ಮೇಲೆ ಯೆಮನ್ನ ಹೌತಿ ದಾಳಿಕೋರರು ನಡೆಸಿದ ಡ್ರೋನ್ ದಾಳಿಯಿಂದಾಗಿ ಉತ್ಪಾದನೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ, ತೈಲ ಮಾನದಂಡ ಬದಲು ಕಾರಣ ಪ್ರತಿ ಬ್ಯಾರೆಲ್ಗೆ 87.7 ಡಾಲರ್ಗೆ ತಲುಪಿದೆ. ಇದು ದೇಶೀಯ ಇಂಧನ ದರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದರೆ, ದೇಶದಲ್ಲಿ ಪಂಚರಾಜ್ಯ ಚುನಾವಣೆ ಕಾರಣ ಸರ್ಕಾರ ದರ ಏರಿಕೆ ಗೋಜಿಗೆ ಹೋಗಿಲ್ಲ.
ಇದಕ್ಕೂ ಮೊದಲು, ಅಂದರೆ 17 ಮಾರ್ಚ್ 2020 ರಿಂದ 6 ಜೂನ್ 2020 ರ ನಡುವೆ 82 ದಿನ ದರ ಪರಿಷ್ಕರಣೆ ಮಾಡಿರಲಿಲ್ಲ. ಇದು ತೈಲ ದರ ಪರಿಷ್ಕರಣೆ ಮಾಡದ ಅತ್ಯಧಿಕ ದಿನಗಳಾಗಿವೆ.