ಪುಣೆ (ಮಹಾರಾಷ್ಟ್ರ):ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಹಾಸ್ಟೆಲ್ವೊಂದರ ಗೋಡೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಆಕ್ಷೇಪಾರ್ಹ ಬರಹ ಬರೆದ ಘಟನೆ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ವಿವಿಯಲ್ಲಿ ಸದಸ್ಯತ್ವ ನೋಂದಣಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿತ್ತು. ಇದರ ಬೆನ್ನಲ್ಲೇ ಈ ಆಕ್ಷೇಪಾರ್ಹ ಪದ ಬರೆಯಲಾಗಿದ್ದು, ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪುಣೆಯಲ್ಲಿರುವ ಈ ವಿಶ್ವವಿದ್ಯಾಲಯದ ಹಾಸ್ಟೆಲ್ ಸಂಖ್ಯೆ 8ರಲ್ಲಿ ಗುರುವಾರ ರಾತ್ರಿ ಪ್ರಧಾನಿ ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಬರಹ ಬರೆದಿರುವುದು ಕಂಡುಬಂದಿದೆ. ಇದರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಂತಹ ಆಕ್ಷೇಪಾರ್ಹ ಬರಹ ಬರೆದವರು ಯಾರು ಎಂಬುವುದನ್ನು ಪತ್ತೆ ಹಚ್ಚಲು ಎಂದು ವಿವಿ ತನಿಖೆಗೆ ಆದೇಶಿಸಿದೆ.
ಅಲ್ಲದೇ, ವಿಶ್ವವಿದ್ಯಾಲಯದ ಪರವಾಗಿ ಡಾ.ಮಹೇಶ್ ರಘುನಾಥ್ ದಾವಂಗೆ ಅವರು ಚತುರಶೃಂಗಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಈಗಾಗಲೇ ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ಹಾಸ್ಟೆಲ್‌ನ ಎಲ್ಲ ಸಿಸಿಟಿವಿಗಳು ಹಾಗೂ ಹಾಸ್ಟೆಲ್ ಸುತ್ತ-ಮುತ್ತಲ್ಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದಾರೆ. ಯಾರು, ಯಾವ ಉದ್ದೇಶಕ್ಕೆ ಈ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.