ಕಟಕ್ (ಒಡಿಶಾ) :ರಾಜ್ಯದಮಹಿಳಾ ಕ್ರಿಕೆಟರ್ ರಾಜಶ್ರೀ ಸ್ವೈನ್ ಎಂಬವರ ಸಾವು ಪ್ರಕರಣದಲ್ಲಿ ತಿರುವು ಸಿಕ್ಕಿದೆ. ಆಕೆಯ ಸ್ಕೂಟರ್‌ನ ಬೂಟ್ ಸ್ಪೇಸ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪತ್ರದಲ್ಲಿ ತನ್ನ ಸಾವಿಗೆ ಕೋಚ್ ಮತ್ತು ಒಡಿಶಾ ಕ್ರಿಕೆಟ್ ಅಸೋಸಿಯೇಷನ್ (ಒಸಿಎ) ಮಾಜಿ ಅಧಿಕಾರಿಯೊಬ್ಬರು ಕಾರಣ ಎಂದು ಉಲ್ಲೇಖಿಸಿರುವುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ ಆಕೆಯ ಕುಟುಂಬಸ್ಥರು ಒಸಿಎ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕಟಕ್ ಜಿಲ್ಲೆಯ ಗುರುಡಿಜಾಟಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆ ಪತ್ರದ ಸತ್ಯಾಸತ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡೆತ್ ನೋಟ್ ಅನ್ನು ಕೈಬರಹ ತಜ್ಞರಿಗೆ ಕಳುಹಿಸಲಾಗುವುದು. ಕೆಲವು ಒಸಿಎ ಅಧಿಕಾರಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ರಾಜಶ್ರೀ ಅವರ ಬಳಿಯಿದ್ದ ಪೆನ್ಗಳು ಮತ್ತು ಬಟ್ಟೆಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಕಟಕ್ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.
ಕೊಲೆ ಎಂದು ಕುಟುಂಬಸ್ಥರ ದೂರು:ಸ್ಕೂಟರ್‌ನಿಂದ ವಶಪಡಿಸಿಕೊಂಡ ಡೆತ್ ನೋಟ್ ಬಗ್ಗೆ ಪ್ರತಿಕ್ರಿಯಿಸಿದ ಆಕೆಯ ತಾಯಿ 'ನನ್ನ ಮಗಳ ಕೈಬರಹಕ್ಕೆ ಹೊಂದಿಕೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ಆಕೆಯ ತಾಯಿಯ ಆರೋಪಗಳನ್ನು ಪುನರುಚ್ಚರಿಸಿದ ರಾಜಶ್ರೀಯ ಸಹೋದರ, ದೇಹದಲ್ಲಿ ಗಾಯದ ಗುರುತುಗಳು ಮತ್ತು ಅವಳ ಕಣ್ಣುಗಳಿಗೆ ಹಾನಿಯಾಗಿರುವುದರಿಂದ ಅವಳನ್ನು ಕೊಲೆ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ. ಅಲ್ಲದೇ ಆಕೆಯ ಸಾವಿಗೆ ಒಸಿಎ ಮತ್ತು ಆಕೆಯ ಕೋಚ್ ಪುಷ್ಪಾಂಜಲಿ ಬ್ಯಾನರ್ಜಿ ಕಾರಣ ಎಂದು ದೂರಿದ್ದಾರೆ. ಎಲ್ಲಾ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುವುದು ಮತ್ತು ಮೃತರ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ಡಿಸಿಪಿ ಪಿನಾಕ್ ಮಿಶ್ರಾ ಭರವಸೆ ನೀಡಿದ್ದಾರೆ.