ರೈಲು ದುರಂತಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದ ಪ್ರಧಾನಿ ಮೋದಿ ಬಾಲಸೋರ್ (ಒಡಿಶಾ): ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ದುರಂತದ ಬಗ್ಗೆ ಪ್ರತಿಯೊಂದು ಆಯಾಮದಲ್ಲೂ ತನಿಖೆಗೆ ಸೂಚನೆ ನೀಡಲಾಗಿದೆ. ದುರಂತಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ನರೇಂದ್ರ ಮೋದಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಇಂದು ಮಧ್ಯಾಹ್ನ ಬಾಲಸೋರ್ ರೈಲುಗಳ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಿದರು. ನಂತರ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಇದೊಂದು ದುಃಖದ ಘಟನೆಯಾಗಿದೆ. ಗಾಯಗೊಂಡವರ ಚಿಕಿತ್ಸೆಗೆ ಸರ್ಕಾರ ಎಲ್ಲ ರೀತಿಯಾಗಿ ಪ್ರಯತ್ನ ಮಾಡಲಿದೆ. ನಾನು ಗಾಯಗೊಂಡ ಸಂತ್ರಸ್ತರನ್ನು ಭೇಟಿ ಮಾಡಿದ್ದೇನೆ. ಮೃತರ ಕುಟುಂಬದೊಂದಿಗೆ ಸರ್ಕಾರವಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಒಡಿಶಾ: ತ್ರಿವಳಿ ರೈಲು ದುರಂತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ
ಅಲ್ಲದೇ, ರೈಲು ದುರಂತ ಗಂಭೀರ ಘಟನೆಯಾಗಿದ್ದು, ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಎಲ್ಲ ಸಂಭಾವ್ಯ ತನಿಖೆಗಳಿಗೆ ಆದೇಶಿಸಲಾಗಿದೆ. ಪ್ರತಿಯೊಂದು ಆಯಾಮದಲ್ಲೂ ತನಿಖೆಗೆ ಸೂಚನೆ ನೀಡಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ದುರಂತಕ್ಕೆ ಕಾರಣರಾದ ಯಾರನ್ನೂ ಬಿಡುವುದಿಲ್ಲ. ರೈಲ್ವೆ ಇಲಾಖೆಯ ಹಳಿಗಳ ಪುನಶ್ಚೇತನಕ್ಕೆ ಶ್ರಮಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
ಇದೇ ವೇಳೆ ಸ್ಥಳದಿಂದ ಪ್ರಧಾನಿ ಮೋದಿ, ಸಂಪುಟ ಕಾರ್ಯದರ್ಶಿ ಮತ್ತು ಆರೋಗ್ಯ ಸಚಿವರೊಂದಿಗೆ ಮಾತನಾಡಿದರು. ಗಾಯಾಳುಗಳು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಸೂಚಿಸಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದರು. ಇಂದು ಬೆಳಗ್ಗೆ ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಸಂತ್ರಸ್ತರ ರಕ್ಷಣೆ, ಪರಿಹಾರ ಮತ್ತು ವೈದ್ಯಕೀಯ ಆರೈಕೆಗೆ ಸಂಬಂಧಿಸಿದ ಅಂಶಗಳ ಬಗ್ಗೆ ಚರ್ಚಿಸಿದ್ದರು.
ಮೃತರ ಸಂಖ್ಯೆ 288ಕ್ಕೆ ಏರಿಕೆ:ಬಾಲಸೋರ್ ಜಿಲ್ಲೆಯಬಹನಾಗಾ ಬಜಾರ್ ನಿಲ್ದಾಣದ ಸಮೀಪ ಶುಕ್ರವಾರ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿ ಈ ದುರಂತ ನಡೆದಿದೆ. ಶನಿವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿದೆ. ಅಲ್ಲದೇ, 747 ಜನರು ಗಾಯಗೊಂಡಿದ್ದು, 56 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ.
ಇದನ್ನೂ ಓದಿ:ಭೀಕರ ತ್ರಿವಳಿ ರೈಲು ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ಣ: ಘಟನೆಯ ತನಿಖೆ ಆರಂಭ