ಬಾಲಸೋರ್ (ಒಡಿಶಾ):ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ ಮೃತರ ಸಂಖ್ಯೆ ಪರಿಷ್ಕರಿಸಲಾಗಿದ್ದು, ಇದುವರೆಗೆ ಒಟ್ಟಾರೆ ಮೃತಪಟ್ಟವರು 288 ಜನರಲ್ಲ, 275 ಮಂದಿ ಎಂದು ಒಡಿಶಾ ಸರ್ಕಾರ ಮಾಹಿತಿ ನೀಡಿದೆ. ಶನಿವಾರ ಸಾವಿನ ಸಂಖ್ಯೆ 288 ಎಂದು ರೈಲ್ವೆ ಇಲಾಖೆ ಹೇಳಿತ್ತು. ನಾವು ಸಹ ಅದನ್ನೇ ಪ್ರಸಾರ ಮಾಡಿದ್ದೇವೆ. ಆದರೆ, ಜಿಲ್ಲಾಡಳಿತ ತಂಡವು ಅವಶೇಷಗಳಿಂದ ಹೊರತೆಗೆದ ಪ್ರತಿಯೊಂದು ಶವಗಳನ್ನು ಪರಿಶೀಲಿಸಿದೆ ಎಂದು ಒಡಿಶಾದ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ನಡುವೆ ಅಪಘಾತ ಸಂಭವಿಸಿ ಘೋರ ದುರಂತ ನಡೆದಿದೆ. ಶನಿವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ರೈಲು ದುರಂತದಲ್ಲಿ ಮೃತರ ಸಂಖ್ಯೆ 288ಕ್ಕೆ ಏರಿದೆ ಎಂದು ವರದಿಯಾಗಿತ್ತು. ಇದೀಗ ಸಾವು-ನೋವಿನ ಬಗ್ಗೆ ಮಾತನಾಡಿರುವ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ, ಒಟ್ಟಾರೆ ಮೃತರ ಸಂಖ್ಯೆ 275 ಆಗಿದೆ ಎಂದು ಹೇಳಿದ್ದಾರೆ. ಟ್ರ್ಯಾಕ್, ಆಸ್ಪತ್ರೆಗಳು ಮತ್ತು ಎರಡು ತಾತ್ಕಾಲಿಕ ಸ್ಥಳಗಳಲ್ಲಿ ಜಿಲ್ಲಾಡಳಿತ ಮತ್ತು ಅದರ ತಂಡ ಪರಿಶೀಲನೆ ನಡೆಸಿ ಈ ಅಂಕಿ-ಅಂಶ ಕಲೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
88 ಶವಗಳ ಗುರುತು ಪತ್ತೆ:ಅಲ್ಲದೇ, ಕೆಲವು ಮೃತದೇಹಗಳನ್ನು ಎರಡು ಬಾರಿ ಎಣಿಕೆ ಮಾಡಿರುವುದು ಕಂಡುಬಂದಿದೆ. ಆದ್ದರಿಂದ ಇದನ್ನು ಹೊರತುಪಡಿಸಿದ ನಂತರ ಜಿಲ್ಲಾಧಿಕಾರಿಗಳು ಸಾವಿನ ಸಂಖ್ಯೆ 275ರಷ್ಟಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 275ರಲ್ಲಿ 88 ಶವಗಳ ಗುರುತು ಪತ್ತೆ ಹಚ್ಚಲಾಗಿದೆ. ಜೊತೆಗೆ ಭಾನುವಾರ ಬೆಳಗಿನ ಜಾವದವರೆಗೆ 78 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇನ್ನೂ 10 ಮೃತದೇಹಗಳನ್ನು ಗುರುತಿಸಲಾಗಿದ್ದು, ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಒಟ್ಟು 1,175 ಗಾಯಾಳುಗಳು: ಸದ್ಯ 170 ಶವಗಳನ್ನು ಭುವನೇಶ್ವರದ ಶವಾಗಾರಗಳು ಮತ್ತು ಇತರ ಆಸ್ಪತ್ರೆಗಳಾದ ಏಮ್ಸ್, ಕ್ಯಾಪಿಟಲ್ ಆಸ್ಪತ್ರೆ, ಎಸ್‌ಯುಎಂ, ಕೆಐಎಂ ಮತ್ತು ಎಎಂಆರ್‌ಐ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಇನ್ನುಳಿದ ಮೃತದೇಹಗಳನ್ನು ಸಹ ಅಲ್ಲಿಗೆ ಸಾಗಿಸಲಾಗುವುದು. ಒಟ್ಟಾರೆಯಾಗಿ 1,175 ಜನ ಗಾಯಾಳುಗಳು ಆಗಿದ್ದಾರೆ. ಭಾನುವಾರ ಬೆಳಗ್ಗೆ ತನಕ 793 ಗಾಯಗೊಂಡ ಪ್ರಯಾಣಿಕರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಉಳಿದಿರುವ 382 ಜನ ಗಾಯಾಳುಗಳು ಬೆಳಗ್ಗೆ ತನಕ ಚಿಕಿತ್ಸೆ ಪಡೆಯುತ್ತಿದ್ದರು. ಈ ಅಂಕಿ-ಅಂಶವನ್ನು ಮತ್ತೊಮ್ಮೆ ಪರಿಷ್ಕರಿಸಲಾಗುತ್ತಿದೆ ಎಂದು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಮುಂದುವರೆದು, ಗುರುತು ಪತ್ತೆ ಸಿಗದ ಮೃತದೇಹಗಳ ಛಾಯಾಚಿತ್ರಗಳನ್ನು ಪಡೆಯುತ್ತಿದ್ದೇವೆ. ಅವುಗಳನ್ನು ವಿಶೇಷ ಪರಿಹಾರ ಆಯುಕ್ತ (ಎಸ್ಆರ್ಎಫ್), ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭುವನೇಶ್ವರ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಸೇರಿ ಮೂರು ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದೇವೆ ಎಂದು ಸಿಎಸ್ ಜೆನಾ ಮಾಹಿತಿ ನೀಡಿದರು.
ಕೋಲ್ಕತ್ತಾಗೆ ಉಚಿತ ಬಸ್ ಸೇವೆ: ಮತ್ತೊಂದೆಡೆ, ತ್ರಿವಳಿ ರೈಲು ದುರಂತದ ಹಿನ್ನೆಲೆಯಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ಕೋಲ್ಕತ್ತಾಗೆ ಉಚಿತ ಬಸ್ ಸೇವೆಗಳನ್ನು ಘೋಷಿಸಿದ್ದಾರೆ. ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ಪುರಿ, ಭುವನೇಶ್ವರ ಮತ್ತು ಕಟಕ್‌ನಿಂದ ಕೋಲ್ಕತ್ತಾಗೆ ಉಚಿತ ಬಸ್ ಸೇವೆ ಇರಲಿದೆ ಎಂದು ಒಡಿಶಾದ ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ. ಪ್ರತಿದಿನ ಸುಮಾರು 50 ಬಸ್‌ಗಳು ಕೋಲ್ಕತ್ತಾ ಮತ್ತು ಒಡಿಶಾದ ಮೇಲಿನ ಮೂರು ನಗರಗಳ ನಡುವೆ ಪ್ರಯಾಣ ನಡೆಸುತ್ತವೆ. ಸಂಪೂರ್ಣ ವೆಚ್ಚವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಭರಿಸಲಾಗುವುದು. ಬಾಲಸೋರ್ ಮಾರ್ಗದಲ್ಲಿ ಸಾಮಾನ್ಯ ರೈಲು ಸೇವೆಯನ್ನು ಮರುಸ್ಥಾಪಿಸುವವರೆಗೆ ಈ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಸಿಎಂಒ ಹೇಳಿದೆ.
ಇದನ್ನೂ ಓದಿ:ನಿವೃತ್ತ ಜಡ್ಜ್ ನೇತೃತ್ವದ ಸಮಿತಿಯಿಂದ ರೈಲು ದುರಂತ ತನಿಖೆ ನಡೆಸಿ: ಸುಪ್ರೀಂ ಕೋರ್ಟ್ಗೆ ಪಿಐಎಲ್