ಕರ್ನಾಟಕ

karnataka

ETV Bharat / bharat

Odisha Train Tragedy: ರೈಲ್ವೆ ಜೆಇ ಬಾಡಿಗೆ ಮನೆಯಲ್ಲಿ ಸಿಬಿಐ ತನಿಖೆ: ಯಾವುದೇ ಸಿಬ್ಬಂದಿ ನಾಪತ್ತೆಯಾಗಿಲ್ಲ- ರೈಲ್ವೆ ಇಲಾಖೆ ಸ್ಪಷ್ಟನೆ - no employee absconding clarifies Railways

ಒಡಿಶಾದ ರೈಲು ಅಪಘಾತದ ತನಿಖೆಯಲ್ಲಿ ಭಾಗಿಯಾಗಿರುವ ಬಹನಾಗಾ ರೈಲ್ವೆ ನಿಲ್ದಾಣದ ಸಿಬ್ಬಂದಿ ಕಾಣೆಯಾಗಿದ್ದಾರೆ ಎಂಬ ವರದಿಯನ್ನು ರೈಲ್ವೆ ಇಲಾಖೆ ಅಲ್ಲಗೆಳೆದಿದೆ. ಇದೇ ವೇಳೆ, ಸಿಬಿಐ ತನಿಖೆಗೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದೆ.

Odisha train tragedy CBI takes JE to rented house for probe no employee absconding clarifies Railways
Odisha Train Tragedy: ರೈಲ್ವೆ ಜೆಇ ಬಾಡಿಗೆ ಮನೆಯಲ್ಲಿ ಸಿಬಿಐ ತನಿಖೆ... ಯಾವ ಸಿಬ್ಬಂದಿ ನಾಪತ್ತೆಯಾಗಿಲ್ಲ ಎಂದ ರೈಲ್ವೆ ಇಲಾಖೆ

By

Published : Jun 20, 2023, 5:55 PM IST

ಬಾಲಸೋರ್​ (ಒಡಿಶಾ):ಒಡಿಶಾದ ಬಾಲಸೋರ್​ ಜಿಲ್ಲೆಯಲ್ಲಿ ನಡೆದ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ಮುಂದುವರೆಸಿದೆ. ಮಂಗಳವಾರ ರೈಲ್ವೆ ಜೂನಿಯರ್ ಎಂಜಿನಿಯರ್ (ಜೆಇ) ಅಮೀರ್ ಖಾನ್ ಎಂಬವರು ಬಾಡಿಗೆಗಿದ್ದ ಮನೆಯಲ್ಲಿ ತನಿಖಾ ತಂಡ ಪರಿಶೀಲನೆ ನಡೆಸಿದೆ. ಇದೇ ವೇಳೆ, ರೈಲ್ವೆ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂಬ ವರದಿಯನ್ನು ಇಲಾಖೆ ತಳ್ಳಿ ಹಾಕಿದೆ. ಯಾವುದೇ ಸಿಬ್ಬಂದಿ ನಾಪತ್ತೆಯಾಗಿಲ್ಲ ಹಾಗೂ ತಲೆಮರೆಸಿಕೊಂಡಿಲ್ಲ ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಜೂನ್​ 2ರಂದು ದೇಶವನ್ನು ಬೆಚ್ಚಿಬೀಳಿಸಿದ್ದ ಎರಡು ಪ್ಯಾಸೆಂಜರ್​ ರೈಲು ಹಾಗೂ ಗೂಡ್ಸ್​ ರೈಲಿನ ಅಪಘಾತದಲ್ಲಿ ಇದುವರೆಗೆ 292 ಮಂದಿ ಸಾವನ್ನಪ್ಪಿದ್ದು, 1100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತದಲ್ಲಿ ವಿಧ್ವಂಸಕ ಕೈವಾಡದ ಶಂಕೆ ವ್ಯಕ್ತವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಈಗಾಗಲೇ ಅಪಘಾತದ ಸ್ಥಳ, ಹಳಿ ಹಾಗೂ ಸಿಗ್ನಲ್​ ರೂಂ ಸೇರಿದಂತೆ ಘಟನೆ ಕುರಿತು ಮಾಹಿತಿಯನ್ನು ಸಿಬಿಐ ಅಧಿಕಾರಿಗಳು ಕಲೆಹಾಕಿ, ಕೆಲವು ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಇದೀಗ ಸೋರೋದಲ್ಲಿರುವ ಸಿಗ್ನಲ್​ ಜೆಇ ಅಮೀರ್ ಖಾನ್ ಎಂಬವರ ಬಾಡಿಗೆ ಮನೆಯನ್ನು ತನಿಖಾ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಅಲ್ಲದೇ, ಅಮೀರ್ ಖಾನ್​ ಸಮ್ಮುಖದಲ್ಲಿ ಆರು ಸದಸ್ಯರ ಸಿಬಿಐ ತಂಡವು ಬಾಡಿಗೆ ಮನೆಯ ಬಾಗಿಲು ತೆರೆದು ತನಿಖೆ ನಡೆಸಿದೆ. ಈ ಅಪಘಾತಕ್ಕೆ ಕಾರಣವಾದ ಸಂದರ್ಭಗಳನ್ನು ಪತ್ತೆ ಹಚ್ಚಲು ಸಿಬಿಐ ತನಿಖೆ ನಡೆಸುತ್ತಿದೆ. ತನಿಖೆಯ ಭಾಗವಾಗಿ ಅಜ್ಞಾತ ಸ್ಥಳದಲ್ಲಿ ಅಮೀರ್ ಖಾನ್ ಅವರನ್ನು ವಿಚಾರಣೆ ಒಳಪಡಿಸಲಾಗಿದೆ ಎಂದು ವರದಿಯಾಗಿದೆ.

ನಾಪತ್ತೆ ವರದಿ ಸುಳ್ಳು- ರೈಲ್ವೆ ಇಲಾಖೆ ಸ್ಪಷ್ಟನೆ: ಮತ್ತೊಂದೆಡೆ, ಸಿಗ್ನಲ್ ಜೆಇ ಮತ್ತು ಕುಟುಂಬ ಬಾಡಿಗೆ ಮನೆಯಿಂದ ನಾಪತ್ತೆಯಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಆದಿತ್ಯ ಕುಮಾರ್ ಚೌಧರಿ ಅಲ್ಲಗೆಳೆದಿದ್ದಾರೆ. ಬಾಲಾಸೋರ್ ರೈಲು ಅಪಘಾತದ ತನಿಖೆಯಲ್ಲಿ ಭಾಗಿಯಾಗಿರುವ ಬಹನಾಗಾ ಸಿಬ್ಬಂದಿ ಕಾಣೆಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳು ವಾಸ್ತವಕ್ಕೆ ದೂರವಾಗಿವೆ. ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದು ಕೇಂದ್ರೀಯ ತನಿಖಾ ದಳದೊಂದಿಗೆ ಸಹಕರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೈಲ್ವೆ ಸಚಿವರ ಒಡಿಶಾ ಪ್ರವಾಸ:ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರದಿಂದ ಒಡಿಶಾ ಪ್ರವಾಸ ಕೈಗೊಂಡಿದ್ದಾರೆ. ಬಾಲಸೋರ್‌ನಲ್ಲಿ ರೈಲು ದುರಂತದ ಸಂದರ್ಭದಲ್ಲಿ ಜನರ ರಕ್ಷಣೆಗೆ ಶ್ರಮಿಸಿದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಲಿದ್ದಾರೆ. ಬಾಲಸೋರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳನ್ನೂ ಭೇಟಿ ಮಾಡಲಿದ್ದಾರೆ. ಅಲ್ಲದೇ, ಬಾಲಸೋರ್ ರೈಲು ನಿಲ್ದಾಣವನ್ನೂ ಪರಿಶೀಲಿಸಿ, ಜನರೊಂದಿಗೆ ಸಚಿವರು ಸಂವಹನ ನಡೆಸಲಿದ್ದಾರೆ. ಪುರಿ ರೈಲ್ವೆ ನಿಲ್ದಾಣಕ್ಕೂ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ವಿಶ್ವಪ್ರಸಿದ್ಧ ರಥಯಾತ್ರೆಯಲ್ಲಿ ಪಾಲ್ಗೊಂಡು ಇಲ್ಲಿ ಯಾತ್ರಾರ್ಥಿಗಳಿಗೆ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ:Odisha Train Accident: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಸಾವು... ಮೃತರ ಸಂಖ್ಯೆ 292ಕ್ಕೆ ಏರಿಕೆ

ABOUT THE AUTHOR

...view details