ಬಾಲಸೋರ್ (ಒಡಿಶಾ): ದೇಶ ಕಂಡ ಅತ್ಯಂತ ಭೀಕರ ರೈಲು ದುರಂತಗಳಲ್ಲಿ ಒಂದಾದ ಒಡಿಶಾದ ತ್ರಿವಳಿ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಮಂಗಳವಾರ ಆರಂಭಿಸಿದೆ. 10 ಜನ ಸದಸ್ಯರನ್ನು ಒಳಗೊಂಡ ತನಿಖಾ ತಂಡವು ಘಟನಾ ಸ್ಥಳವಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿತು. ಇಲ್ಲಿನ ಹಳಿಗಳು ಮತ್ತು ಸಿಗ್ನಲ್ ರೂಂ ಬಗ್ಗೆ ರೈಲ್ವೆ ಅಧಿಕಾರಿಗಳಿಂದ ತನಿಖಾ ಅಧಿಕಾರಿಗಳು ವಿವರವಾದ ಮಾಹಿತಿ ಸಂಗ್ರಹಿಸಿದರು.
ಜೂನ್ 2ರಂದು ರೈಲು ಕೋಲಮಂಡಲ್ ಎಕ್ಸ್ಪ್ರೆಸ್, ಬೆಂಗಳೂರು - ಹೌರಾ ಎಕ್ಸ್ಪ್ರೆಸ್ ಹಾಗೂ ಗೂಡ್ಸ್ ರೈಲಿಂದ ಉಂಟಾದ ಅಪಘಾತದಲ್ಲಿ ಒಟ್ಟು 288 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂದಾಜು 1,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ದುರ್ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿತ್ತು. ಅಪಘಾತದ ಹಿಂದೆ ವಿಧ್ವಂಸಕ ಕೃತ್ಯ ಮತ್ತು ಹೊರಗಿನವರ ಕೈವಾಡವಿರುವ ಬಗ್ಗೆ ರೈಲ್ವೆ ಇಲಾಖೆ ಶಂಕಿಸಿದೆ. ಅಲ್ಲದೇ, ಖುರ್ದಾ ರಸ್ತೆ ವಿಭಾಗದ ಡಿಆರ್‌ಎಂ ರಿಂಕೇಶ್ ರಾಯ್ ಎಲೆಕ್ಟ್ರಾನಿಕ್ ಸಿಗ್ನಲಿಂಗ್ ವ್ಯವಸ್ಥೆಯ ವಿರೂಪದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಇಡೀ ಅಪಘಾತದಲ್ಲಿ ಕ್ರಿಮಿನಲ್ ಆಯಾಮಗಳ ತನಿಖೆ ಬಗ್ಗೆ ರೈಲ್ವೆ ಮಂಡಳಿಯು ಸಿಬಿಐ ತನಿಖೆಗೆ ಭಾನುವಾರ ಶಿಫಾರಸು ಮಾಡಿದೆ. ಇಂದಿನಿಂದ ಸಿಬಿಐ ಅಧಿಕಾರಿಗಳು ತನಿಖೆಯ ಅಖಾಡಕ್ಕೆ ಇಳಿದಿದ್ದಾರೆ. ತನಿಖಾ ಅಧಿಕಾರಿಗಳ ಜೊತೆಗೆ ವಿಧಿವಿಜ್ಞಾನ ತಂಡವು ರೈಲು ಅಪಘಾತದ ಸ್ಥಳಕ್ಕೆ ತೆರಳಿತು. ಈ ವೇಳೆ ಸಿಗ್ನಲ್ ರೂಂ ಸಿಬ್ಬಂದಿಯೊಂದಿಗೆ ಮಾತನಾಡಿ, ವಿವಿಧ ಉಪಕರಣಗಳ ಕಾರ್ಯನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಸಿಬಿಐ ಹಾಗೂ ವಿಧಿವಿಜ್ಞಾನ ತಂಡ ಪಡೆಯಿತು.