ಕಟಕ್ (ಒಡಿಶಾ): ಒಡಿಶಾದ ಬಾಲಾಸೋರ್ನಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕೋಲ್ಕತ್ತಾ ಮೂಲದ ಪಲ್ಟು ನಸ್ಕರ್ ಎಂದು ಗುರುತಿಸಲಾಗಿದೆ. ಈ ಮೂಲಕ ಒಡಿಶಾ ರೈಲು ಅಪಘಾತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ.
ರೈಲು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಪಲ್ಟು ನಸ್ಕರ್ (26) ಎಂಬಾತನೇ ಮೃತ ಯುವಕ. ಈತನನ್ನು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಕಟಕ್‌ನ ಆಸ್ಪತ್ರೆಯೊಂದರಲ್ಲೇ ಕಳೆದ ಕೆಲವು ವಾರಗಳಲ್ಲಿ ರೈಲು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಜೂನ್ 16ರಂದು ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಮೃತರನ್ನು ಪ್ರಕಾಶ್ ರಾಮ್ ಎಂದು ಗುರುತಿಸಲಾಗಿತ್ತು. ರೈಲು ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಚಿಕಿತ್ಸೆಗಾಗಿ ಎಸ್‌ಸಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದರು. ಈ ಹಿಂದೆ ವಿಜಯ್ ಪಾಸ್ವಾನ್ ಎಂಬ ವ್ಯಕ್ತಿಯೂ ಎಸ್‌ಸಿಬಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಕೊನೆಯುಸಿರೆಳೆದಿದ್ದರು.
ಜೂನ್ 2ರಂದು ನಡೆದಿದ್ದ ಭೀಕರ ರೈಲು ದುರಂತ: ಜೂನ್ 2ರಂದು ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತ ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಶಾಲಿಮಾರ್ ಎಕ್ಸ್‌ಪ್ರೆಸ್ ಮತ್ತು ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲಿನ ನಡುವೆ ಡಿಕ್ಕಿ ಸಂಭವಿಸಿತ್ತು. ಅಪಘಾತದಲ್ಲಿ 1,000ಕ್ಕೂ ಅಧಿಕ ಹೆಚ್ಚು ಜನರು ಗಾಯಗೊಂಡಿದ್ದರು. 288 ಜನರು ಸಾವನ್ನಪ್ಪಿದ್ದರು ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿತ್ತು. ಬಳಿಕ ಒಡಿಶಾ ಸರ್ಕಾರ 275 ಮಂದಿ ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿತ್ತು. ಆದರೆ ಇದೀಗ ಮೃತರ ಸಂಖ್ಯೆ 292ಕ್ಕೆ ಏರಿಕೆಯಾಗಿದೆ.
ಸದ್ಯ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿದೆ. ಈ ಸಂಬಂಧ ಸಿಬಿಐ ಅಧಿಕಾರಿಗಳು ಅಪಘಾತದ ಸ್ಥಳ, ಟ್ರ್ಯಾಕ್‌ಗಳು, ಸಿಗ್ನಲಿಂಗ್ ರೂಮ್, ಕಂಟ್ರೋಲ್ ರೂಮ್ಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ, ಬಹನಾಗಾ ಬಜಾರ್ ಸ್ಟೇಷನ್ ಮಾಸ್ಟರ್ ಮತ್ತು ಸಿಗ್ನಲಿಂಗ್ ಅಧಿಕಾರಿಗಳನ್ನು ವಶಕ್ಕೆ ವಿಚಾರಣೆ ನಡೆಸಿದ್ದಾರೆ. ಪ್ರಕರಣ ತನಿಖೆ ಮುಂದುವರೆದಿದೆ.
ಮತ್ತೊಂದೆಡೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ 21ರಂದು ಮತ್ತೆ ಬಾಲಸೋರ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ರೈಲು ಅಪಘಾತದ ಸಮಯದಲ್ಲಿ ಜನರ ರಕ್ಷಣೆಗೆ ಸಹಕರಿಸಿದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಲಿದ್ದಾರೆ.
ಇದನ್ನೂ ಓದಿ :Odisha Train Tragedy: ಕಟಕ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸಾವು.. ಮೃತರ ಸಂಖ್ಯೆ 290ಕ್ಕೆ ಏರಿಕೆ