ಕಟಕ್ (ಒಡಿಶಾ) : ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಗಾಯಗೊಂಡು ಕಟಕ್ನ ಆಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಇದಕ್ಕೂ ಮೊದಲು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದರು. ಕಟಕ್ನ ಎಸ್ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಅವರು ರೈಲು ದುರಂತದ ಗಾಯಾಳುಗಳನ್ನು ಭೇಟಿ ಮಾಡಿ ಪರಿಹಾರದ ಭರವಸೆ ನೀಡಿದರು.
ಬಳಿಕ ಮಾತನಾಡಿ, ನಾವು ರೈಲು ದುರಂತದಲ್ಲಿ ಗಾಯಗೊಂಡವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಈಗಾಗಲೇ ಹೆಚ್ಚಿನ ವೈದ್ಯರು, ನರ್ಸ್, ಮತ್ತು ಅಧಿಕಾರಿಗಳ ತಂಡವನ್ನು ಗಾಯಾಳುಗಳ ಚಿಕಿತ್ಸೆಗೆ ನಿಯೋಜಿಸಲಾಗಿದೆ. ಪಶ್ಚಿಮ ಬಂಗಾಳದ ಸುಮಾರು 57 ಜನ ರೈಲು ದುರಂತದಲ್ಲಿ ಗಾಯಗೊಂಡು ಎಸ್ಸಿಬಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಅಪಘಾತದಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಕೆಲವರು ಕೈ ಕಾಲು ಕಳೆದುಕೊಂಡಿದ್ದಾರೆ. ಇನ್ನು ಕೆಲವರು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ದುರಂತವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಸುಮಾರು 103 ಪ್ರಯಾಣಿಕರ ಮೃತದೇಹವನ್ನು ಪತ್ತೆ ಹಚ್ಚಲಾಗಿದ್ದು, ಇನ್ನೂ 30 ಪ್ರಯಾಣಿಕರು ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ನಾನು ಈಗಾಗಲೇ ಮೃತರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಾಗೂ ಗಂಭೀರ ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೇನೆ. ಅಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 900 ಜನರಿಗೆ 10,000 ರೂ ನೀಡಲಾಗುವುದು ಎಂದು ಅವರು ಇದೇ ವೇಳೆ ಹೇಳಿದರು.