ಕರ್ನಾಟಕ

karnataka

ETV Bharat / bharat

ಒಡಿಶಾ ರೈಲು ದುರಂತ.. ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲು​, ತನಿಖೆಗೆ ಮನವಿ! - ಅನೇಕ ಸೆಕ್ಷನ್‌ಗಳ ಅಡಿ ಒಡಿಶಾ ಸರ್ಕಾರಿ ರೈಲ್ವೆ ಪೊಲೀಸರು

ದೇಶವನ್ನೇ ಬೆಚ್ಚಿಬೀಳಿಸಿದ್ದ ಒಡಿಶಾ ಬಾಲಸೋರ್​ ರೈಲು ದುರಂತದ ಬಗ್ಗೆ ಅಧಿಕೃತವಾಗಿ ಎಫ್​ಐಆರ್​ ದಾಖಲಿಸಿ ತನಿಖೆಗೆ ಮನವಿ ಮಾಡಲಾಗಿದೆ.

odisha-train-accident-grp-registers-fir-against-unidentified-persons
ಒಡಿಶಾ ರೈಲು ದುರಂತ.. ಅಪರಿಚಿತರ ವಿರುದ್ಧ ಎಫ್​ಐಆರ್​, ತನಿಖೆಗೆ ಮನವಿ!

By

Published : Jun 6, 2023, 6:44 AM IST

ಬಾಲಸೋರ್ (ಒಡಿಶಾ):ಭಯಾನಕ ರೈಲ್ವೆ ಅಪಘಾತದ ತನಿಖೆ ಚುರುಕುಗೊಂಡಿದೆ. ರೈಲ್ವೆ ಕಾಯ್ದೆ 1989 ಮತ್ತು ಭಾರತೀಯ ದಂಡ ಸಂಹಿತೆಯ (IPC) ಅನೇಕ ಸೆಕ್ಷನ್‌ಗಳ ಅಡಿ ಒಡಿಶಾ ಸರ್ಕಾರಿ ರೈಲ್ವೆ ಪೊಲೀಸರು (GRP) ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.

ಎಫ್‌ಐಆರ್ ವರದಿಯ ಪ್ರಕಾರ, ರೈಲ್ವೆ ಕಾಯ್ದೆಯ ಸೆಕ್ಷನ್ 154, 175 ಮತ್ತು 153 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 337, 338, 304 ಎ ಮತ್ತು 34 ರ ಅಡಿ ಅಪಘಾತಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

"03.06.2023 ರಂದು ಬೆಳಗ್ಗೆ 01.00 ಗಂಟೆಗೆ, ಚಕ್ಲುಂಡಪಾಲ್, ಪೊಲೀಸ್ ಠಾಣೆ ತುರುಣುಂಗಾ, ಜಿಲ್ಲೆ ಕೆಯೋಜಾರ್‌ನಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾಪು ಕುಮಾರ್ ನಾಯ್ಕ್ ಎಂಬುವರು 02.06.2023 ರಂದು ಮಧ್ಯಾಹ್ನ 06 ಗಂಟೆಗೆ ನೀಡಿದ ದೂರಿನ ಮೇರೆಗೆ ಬಾಲಸೋರ್ ಜಿಆರ್‌ಪಿಎಸ್‌ನ ಪೂರ್ವ ಎಸ್‌ಐ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ರೈಲು ಸಂಖ್ಯೆ-12841 ಹೌರಾ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ-12864 ಯಶವಂತಪುರ -ಹೌರಾ ಎಕ್ಸ್‌ಪ್ರೆಸ್ ನಡುವೆ ಡಿಕ್ಕಿ ಸಂಭವಿಸಿದ ಕಾರಣ, ಎರಡೂ ರೈಲುಗಳ ಬೋಗಿಗಳಲ್ಲಿ ಇದ್ದ 200 ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

"ಮೃತ ದೇಹಗಳನ್ನು ಮತ್ತು ಗಾಯಗೊಂಡ ವ್ಯಕ್ತಿಗಳನ್ನು DHH ಬಾಲಸೋರ್, DHH ಭದ್ರಕ್, CHC ಸೊರೊ ಮತ್ತು ಇತರ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಪಟ್ಟವರಿಗೆ ಒದಗಿಸಲಾಗಿದೆ ಎಂದು ಎಫ್​ಐಆರ್​ನಲ್ಲಿ ಮಾಹಿತಿ ನೀಡಲಾಗಿದೆ. ಬಾಲಸೋರ್ GRPS ಪ್ರಕರಣ ಸಂಖ್ಯೆ-64, ದಿನಾಂಕ 03.06.2023 ಸೆಕ್ಷನ್ 337/338/304A ಅಡಿ /34 IPC /153/154/175 ರೈಲ್ವೇ ಕಾಯಿದೆ ಅನ್ವಯ ಎಫ್​ಐಆರ್​ ದಾಖಲಿಸಲಾಗಿದ್ದು, ಕಟಕ್​ನ OPS SDRPO ರಂಜೀತ್ ನಾಯಕ್​ ಅವರಿಗೆ ತನಿಖೆ ನಡೆಸುವಂತೆ ಮನವಿ ಮಾಡಲಾಗಿದ್ದು, ಆ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಎಫ್‌ಐಆರ್​ನಲ್ಲಿ ಘಟನೆಗೆ ಯಾರು ಕಾರಣ ಎಂದು ಹಾಗೂ ನಿರ್ದಿಷ್ಟ ರೈಲ್ವೆ ಉದ್ಯೋಗಿಗಳ ಎಸಗಿರುವ ತಪ್ಪೇನು ಎಂಬ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಘಟನೆಗೆ ಯಾರು ಹೊಣೆ ಎಂಬುದು ತನಿಖೆ ಬಳಿಕವೇ ಹೊರಗೆ ಬರಬೇಕಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಲೆಕ್ಟ್ರಿಕಲ್​ ಇಂಟರ್​ ಲಾಕಿಂಗ್​ ಸಿಸ್ಟಮ್​​​ನಲ್ಲಿ ಆಗಿರುವ ಎಡವಟ್ಟಿನಿಂದಾಗಿ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ಲೋಕೋ ಫೈಲಟ್​​ ಯಾವುದೇ ತಪ್ಪೆಸಗಿಲ್ಲ, ಆತನಿಗೆ ಬಂದ ಆಜ್ಞೆಯ ಅನುಸಾರ ಆತ ನಡೆದುಕೊಂಡಿದ್ದಾನೆ ಎನ್ನಲಾಗಿದೆ. ಈ ನಡುವೆ, ಲೋಕೋಫೈಲಟ್​​​​ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಒಡಿಶಾ ರೈಲು ಅಪಘಾತದಲ್ಲಿ 275 ಜನರು ಸಾವನ್ನಪ್ಪಿದ್ದಾರೆ ಎಂದು ಒಡಿಶಾ ಸರ್ಕಾರದ ಅಧಿಕೃತ ಮೂಲಗಳು ಖಚಿತ ಪಡಿಸಿವೆ. ಈ ಮೊದಲು ಸಾವಿನ ಸಂಖ್ಯೆ 288 ಎಂದು ವರದಿಯಾಗಿತ್ತು. ಆ ಸಂಖ್ಯೆ 288 ಅಲ್ಲ ಎಂದು ಒಡಿಶಾ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದಾರೆ. ಇನ್ನು ಘಟನೆಯಲ್ಲಿ 1000 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. ಈ ನಡುವೆ ದುರಂತದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ ನೀಡಿ ರೈಲ್ವೆ ಮಂಡಳಿ ಭಾನುವಾರ ಶಿಫಾರಸು ಮಾಡಿದೆ. ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಈ ದುರಂತ ಸಂಭವಿಸಿತ್ತು.

ಇದನ್ನು ಓದಿ:ನವ ವಿವಾಹಿತನ ಬಲಿ ಪಡೆದ ಒಡಿಶಾ ರೈಲು ದುರಂತ: ಕುಟುಂಬಸ್ಥರ ಆಕ್ರಂದನ

ABOUT THE AUTHOR

...view details