ಭುವನೇಶ್ವರ (ಒಡಿಶಾ) :ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ) ಶ್ರೀಲಂಕಾ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್‌ರ 'ಟೈಂ ಔಟ್' ಅನ್ನು ಬಳಸಿಕೊಂಡಿದೆ. ಹೆಲ್ಮೆಟ್ ಇಲ್ಲದೇ ಸಂಚಾರ ನಡೆಸಿದಲ್ಲಿ ನಿಮ್ಮ ಟೈಂ ಕೂಡ್ ಔಟ್ ಆಗಲಿದೆ ಎಂದು ಉದಾಹರಿಸಿದೆ.
ಈ ಬಗ್ಗೆ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಮ್ಯಾಥ್ಯೂಸ್‌ರ ಚಿತ್ರಗಳನ್ನು ಹಂಚಿಕೊಂಡಿರುವ ಎಸ್‌ಟಿಎ #CWC23 #RoadSafety ಹ್ಯಾಷ್ಟ್ಯಾಗ್ ಹಾಕಲಾಗಿದ್ದು, ನೀವು ಹೀಗೆ ವಿಕೆಟ್ ಕಳೆದುಕೊಳ್ಳಬೇಡಿ. ಸುರಕ್ಷಿತವಾಗಿ ದೊಡ್ಡ ಇನಿಂಗ್ಸ್ ಆಡಿ. ಯಾವಾಗಲೂ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್ ಅನ್ನು ಧರಿಸಿ ಮತ್ತು ಅದರ ಪಟ್ಟಿಯನ್ನು ಕಟ್ಟಿಕೊಳ್ಳಿ. ಜೊತೆಗೆ ನಿಮ್ಮವರ ಸುರಕ್ಷತೆ ಬಗ್ಗೆಯೂ ಎಚ್ಚರ ವಹಿಸಿ. ಅದು ಆನ್ ಫೀಲ್ಡ್ ಅಥವಾ ಆಫ್ ಫೀಲ್ಡ್ ಯಾವುದೇ ಆಗಿರಲಿ ಹೆಲ್ಮೆಟ್ ಕಡ್ಡಾಯವಾಗಿರಲಿ ಎಂದು ಸಲಹೆ ನೀಡಿದೆ.
ಹೆಲ್ಮೆಟ್‌ಗಳ ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸಿರುವ ಸಾರಿಗೆ ಅಧಿಕಾರಿಗಳು, ಕಳಪೆ ಗುಣಮಟ್ಟದ ಹೆಲ್ಮೆಟ್ಗಳು ನಿಮ್ಮ ವಿಕೆಟ್ (ಪ್ರಾಣ)ಗೆ ಸಂಚಕಾರ ತರುತ್ತವೆ. ಹೀಗಾಗಿ ಸಂಚಾರ ಮಾಡುವಾಗ ಉತ್ತಮ ಗುಣಮಟ್ಟದ ಶಿರಸ್ತ್ರಾಣಗಳನ್ನು ಬಳಸಬೇಕು. ಇದಕ್ಕೆ ಉದಾಹರಣೆ ನವೆಂಬರ್ 6 ರಂದು ನಡೆದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ವಿಶ್ವಕಪ್ ಪಂದ್ಯದ ವೇಳೆ ಕ್ರಿಕೆಟಿಗ ಏಂಜೆಲೊ ಮ್ಯಾಥ್ಯೂಸ್ ಅವರ ವಿಕೆಟ್ ಸಾಕ್ಷಿ ಎಂಬಂತೆ ಅವರ ಎರಡು ಫೋಟೋಗಳನ್ನು ಹಂಚಿಕೊಂಡಿದೆ.
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮ್ಯಾಥ್ಯೂಸ್ ಅವರ ಹೆಲ್ಮೆಟ್‌ನ ಪಟ್ಟಿಯು ಕಟ್ ಆಗಿದ್ದರಿಂದ ನಿಗದಿತ 2 ನಿಮಿಷ ಕಳೆದರೂ ಬ್ಯಾಟ್ ಮಾಡಲು ಆಗಮಿಸದ ಕಾರಣ ಅವರನ್ನು ಟೈಂ ಔಟ್ ಎಂದು ಘೋಷಿಸಲಾಯಿತು. ಇದನ್ನೇ ಸಾರಿಗೆ ಅಧಿಕಾರಿಗಳು ಮಾರ್ಮಿಕವಾಗಿ ಉದಾಹರಣೆಯಾಗಿ ಬಳಸಿಕೊಂಡಿದ್ದಾರೆ.