ನಬರಂಗಪುರ (ಒಡಿಶಾ): ಆಶ್ರಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಮುಖ್ಯೋಪಾಧ್ಯಾಯ ಸೇರಿದಂತೆ ಇಬ್ಬರು ಶಿಕ್ಷಕರು ಸೇರಿಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ.
ರಾಯಗಢ ಪೊಲೀಸ್ ಠಾಣೆ ವ್ಯಾಪ್ತಿಯ ಆಶ್ರಮ ಶಾಲೆಯಲ್ಲಿ 11 ವರ್ಷದ ಸಂತ್ರಸ್ತ ಬಾಲಕಿ ಓದುತ್ತಿದ್ದಳು. ನವೆಂಬರ್ 7ರಂದು ಈ ಹೇಯ ಘಟನೆ ನಡೆದಿದೆ. ಮರು ದಿನ ಸಂತ್ರಸ್ತೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ಇದರಿಂದ ಮಗಳ ಅಸ್ವಸ್ಥತೆಯ ವಿಷಯವನ್ನು ಪೋಷಕರಿಗೆ ತಿಳಿಸಲಾಗಿದೆ. ನೋವಿನಿಂದ ಬಳಲುತ್ತಿದ್ದ ಮಗಳನ್ನು ಕುಟುಂಬಸ್ಥರು ಚಿಕಿತ್ಸೆಗೆಂದು ವೈದ್ಯಕೀಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಆದರೂ, ನೋವು ಕಡಿಮೆಯಾಗದ ಕಾರಣ ಕುಟುಂಬಸ್ಥರು ಆಕೆಯನ್ನು ನಬರಂಗಪುರ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ, ವೈದ್ಯರು ಪರೀಕ್ಷಿಸಿ, ಸಂತ್ರಸ್ತೆಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಆಗ ಆಕೆ ಶಾಲೆಯ ಶೌಚಾಲಯದಲ್ಲಿ ಮುಖ್ಯೋಪಾಧ್ಯಾಯ ಮತ್ತು ಸಹಾಯಕ ಶಿಕ್ಷಕ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಇದರಿಂದ ಪಾಲಕರು ಕುಂಡೇಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಐಪಿಸಿ ಮತ್ತು ಪೋಕ್ಸೋ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸಂತ್ರಸ್ತೆಗೆ ನಬರಂಗಪುರ ಡಿಎಚ್‌ಎಚ್‌ನಲ್ಲಿ ಚಿಕಿತ್ಸೆ ಮುಂದುವರೆದಿದೆ.