ಭುವನೇಶ್ವರ (ಒಡಿಶಾ): ಚಾಲನಾ ಪರವಾನಗಿಗಾಗಿ ಭಾರಿ ಲಂಚ ಕೊಡಬೇಕು ಎಂಬುದು ಸಾಮಾನ್ಯವಾಗಿ ಕೇಳಿ ಬರುವ ಗಂಭೀರ ಆರೋಪ. ಅದರಲ್ಲೂ ನ್ಯಾಯಯುತವಾಗಿ ಹೋದರೆ ಚಾಲನೆ ಮಾಡುವುದಕ್ಕೆ ಬರುವುದೇ ಇಲ್ಲ ಎಂದು ಹೇಳಿ ಫೇಲ್ ಮಾಡಿ ಕಳುಹಿಸುವುದೂ ಉಂಟು ಎಂದು ಹೇಳಲಾಗುತ್ತದೆ. ಆದರೆ, ಈ ನಿಯಮ ಇದಕ್ಕೆಲ್ಲಾ ಬ್ರೇಕ್ ಹಾಕಲಿದೆ.
ಚಾಲನಾ ಪರವಾನಗಿ ಇನ್ಮುಂದೆ ಈ ರಾಜ್ಯದಲ್ಲಿ ಡಿಜಿಟಲ್ ಮೋಡ್‌ನಲ್ಲಿ ಲಭ್ಯವಾಗಲಿದೆ. ಎಲ್ಲ ಆರ್ಟಿಒ ಪರೀಕ್ಷಾ ಕೇಂದ್ರಗಳಲ್ಲಿ ADTS ಎಂಬ ತಂತ್ರಜ್ಞಾನವನ್ನು ಅನುಷ್ಠಾನ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅನುಗುಲ್, ಬರಿಪದ, ಭದ್ರಕ್, ಬಲಂಗೀರ್, ದಿಯೋಗಢ, ಧೆಂಕನಲ್, ಗಂಜಾಂ, ನಯಾಗಢ, ಫುಲ್ಬನಿ, ರಾಯರಂಗ್‌ಪುರ್, ರೂರ್ಕೆಲಾ, ಸುಂದರ್‌ಗಢ, ತಾಲ್ಚೆರ್, ಕೆಂದುಜಾರ್, ತಾಲ್ಚೆರ್, ನಬರಂಗ್‌ಪುರ್ ಮತ್ತು ಸೋನೆಪುರ್ನಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.
ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ನಲ್ಲಿ ಈ ತಂತ್ರಜ್ಞಾನ ಅಳವಡಿಸಿರುವುದರಿಂದ ಚಾಲನಾ ಕೌಶಲ್ಯದ ಬಗ್ಗೆ ಕ್ಯಾಮರಾಗಳು, ಸೆನ್ಸರ್‌ಗಳು ಮತ್ತು ಕಂಪ್ಯೂಟರ್‌ಗಳು ಈ ಬಗ್ಗೆ ಮಾಹಿತಿ ನೀಡಿ ಡಿಎಲ್ ಕೊಡಬೇಕೋ ಬೇಡವೋ ಎಂಬ ಬಗ್ಗೆ ನಿರ್ಧಾರ ಮಾಡುತ್ತವಂತೆ.
ರಸ್ತೆ ಅಪಘಾತಗಳ ಅಪಾಯವನ್ನು ಕಡಿಮೆ ಮಾಡಲು ಮತ್ತು ಹಸ್ತಚಾಲಿತ ತಪಾಸಣೆ ಮತ್ತು ಮಾನವ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಇಲಾಖೆಯು ರಾಜ್ಯದ ವಿವಿಧ ಭಾಗಗಳಲ್ಲಿ ಈ ಸ್ವಯಂಚಾಲಿತ ಚಾಲನಾ ಪರೀಕ್ಷಾ ವ್ಯವಸ್ಥೆಗಳನ್ನು ಸ್ಥಾಪಿಸಿದೆ ಎಂದು ಹೇಳಲಾಗಿದೆ.