Odisha Rail Mishap: ಒಡಿಶಾ ರೈಲು ದುರಂತಕ್ಕೂ ಮುನ್ನ ಸೆರೆಯಾದ ಹೊಸ ವಿಡಿಯೋ ವೈರಲ್ ಭುವನೇಶ್ವರ (ಒಡಿಶಾ):ರಾಜ್ಯದ ಬಾಲಸೋರ್ ಜಿಲ್ಲೆಯಲ್ಲಿ ಜೂನ್ 2ರಂದು ನಡೆದ ಅತ್ಯಂತ ಭೀಕರ ರೈಲು ದುರಂತಕ್ಕೆ (Odisha train accident) ಸಂಬಂಧಿಸಿದ ಹೊಸ ವಿಡಿಯೋ ಹೊರಬಿದ್ದಿದೆ. ಅಪಘಾತದ ಕೊನೆಯ ಕ್ಷಣಗಳ ದೃಶ್ಯಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ಸದ್ಯ ವಿಡಿಯೋ ತುಣಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇದನ್ನೂ ಓದಿ:ಒಡಿಶಾ ರೈಲು ಅಪಘಾತ: 40 ಜನರು ವಿದ್ಯುತ್ ಶಾಕ್ನಿಂದಲೇ ಮೃತಪಟ್ಟಿರುವುದು ಬೆಳಕಿಗೆ!
ಕಳೆದ ಶುಕ್ರವಾರ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದ ಬಳಿ ಸಂಭವಿಸಿದ ತ್ರಿವಳಿ ರೈಲು ರಣ ಭೀಕರ ಅಪಘಾತದಲ್ಲಿ ಕನಿಷ್ಠ 288 ಪ್ರಯಾಣಿಕರು ಸಾವನ್ನಪ್ಪಿದ್ದು, ಸುಮಾರು 1,100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು - ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ನಡುವೆ ಉಂಟಾದ ಈ ಅಪಘಾತವು ಭಾರತೀಯ ರೈಲ್ವೆಯ ಇತಿಹಾಸದಲ್ಲೇ ನಾಲ್ಕನೇ ದೊಡ್ಡ ಅತಿ ದೊಡ್ಡ ಸಾವು-ನೋವಿಗೆ ಕಾರಣವಾಗಿತ್ತು.
ರೈಲು ದುರಂತದ ವಿಡಿಯೋದಲ್ಲೇನಿದೆ?: ರಾತ್ರಿ ವೇಳೆ ಪ್ರಯಾಣಿಕರು ತಮ್ಮ ಬರ್ತ್‌ಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸ್ವಚ್ಛತಾ ಕಾರ್ಮಿಕರು ರೈಲಿನ ಕೋಚ್‌ನ ನೆಲ ಒರೆಸುವ ದೃಶ್ಯಗಳಿವೆ. ಇದೇ ವೇಳೆ ಹಠಾತ್ ಜರ್ಕ್ ಉಂಟಾಗಿ ಕ್ಯಾಮರಾ ಅಲುಗಾಡುತ್ತದೆ. ಪ್ರಯಾಣಿಕರು ಜೋರಾಗಿ ಕಿರುಚಾಡುವ ಧ್ವನಿಯೂ ಕೇಳಿಸುತ್ತದೆ. ಏಕಾಏಕಿ ಕೊನೆಗೊಳ್ಳುವ ವಿಡಿಯೋದಲ್ಲಿ ಕಿರುಚಾಟದ ಶಬ್ದದೊಂದಿಗೆ ಸಂಪೂರ್ಣ ಕತ್ತಲು ಆವರಿಸುವ ಕ್ಷಣಗಳು ದಾಖಲಾಗಿವೆ.
ಇದನ್ನೂ ಓದಿ:ಒಡಿಶಾ ರೈಲು ದುರಂತದಲ್ಲಿ 88 ಪ್ರಯಾಣಿಕರ ಪ್ರಾಣ ಉಳಿಸಿದ ಕೆಚ್ಚೆದೆಯ ವೀರರಿವರು!
ಘೋರ ರೈಲು ದುರಂತ: ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಬಹುದೊಡ್ಡ ದುರಂತ ಸಂಭವಿಸಿತ್ತು. ಇದರಿಂದ ರೈಲಿನ ಕೆಲವು ಬೋಗಿಗಳು ಹಳಿಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಉರುಳಿದ್ದವು. ಇದೇ ಸಂದರ್ಭದಲ್ಲಿ ಹಾದುಹೋಗುತ್ತಿದ್ದ ಬೆಂಗಳೂರು- ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳಿಗೂ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಅಪ್ಪಳಿಸಿದ್ದವು. ಮೇಲ್ನೋಟಕ್ಕೆ ಸಿಗ್ನಲ್ ಲೋಪದ ಬಗ್ಗೆಯೂ ಸಂಶಯ ಉಂಟಾಗಿದೆ.
ಇದರ ನಡುವೆ ದುರ್ಘಟನೆಯಲ್ಲಿ ವಿಧ್ವಂಸಕ ಸಂಚಿನ ಅನುಮಾನ ಕೂಡಾ ವ್ಯಕ್ತವಾಗಿದೆ. ಹೀಗಾಗಿ ರೈಲ್ವೆ ಸಚಿವಾಲಯದ ಶಿಫಾರಸಿನ ಮೇರೆಗೆ ಕೇಂದ್ರ ತನಿಖಾ ದಳ (ಸಿಬಿಐ) ಈಗಾಗಲೇ ಈ ಅಪಘಾತದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಜೊತೆಗೆ ಘಟನಾ ಸ್ಥಳಕ್ಕೆ ಸಿಬಿಐ ಅಧಿಕಾರಿಗಳ ತಂಡ ಭೇಟಿ ನೀಡಿ ಹಳಿ ಮತ್ತು ಸಿಗ್ನಲ್ ಕೊಠಡಿಯನ್ನು ಪರಿಶೀಲಿಸಿ ಮಾಹಿತಿಯನ್ನೂ ಕಲೆ ಹಾಕಿದೆ.
ಮತ್ತೊಂದೆಡೆ, ಪ್ರಧಾಣಿ ನರೇಂದ್ರ ಮೋದಿ ಘಟನಾ ಸ್ಥಳಕ್ಕೆ ಭೇಟಿ ಪರಿಸ್ಥಿತಿ ಅವಲೋಕಿಸಿದ್ದರು. ಜೊತೆಗೆ ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳು ಆರೋಗ್ಯವನ್ನು ವಿಚಾರಿಸಿದ್ದರು. ಅಲ್ಲದೇ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲು ಹಳಿಗಳ ದುರಸ್ತಿ ಹಾಗೂ ರೈಲು ಸಂಚಾರ ಮರು ಪ್ರಾರಂಭವಾಗುವವರೆಗೂ ಮೂರು ದಿನಗಳ ಘಟನಾ ಸ್ಥಳದಲ್ಲೇ ಇದ್ದರು.
ಇದನ್ನೂ ಓದಿ:ಒಡಿಶಾ ರೈಲು ದುರಂತ: ಮೊದಲ FIR ದಾಖಲಿಸಿದ ಸಿಬಿಐ; ತಪ್ಪು ಸಾಬೀತಾದರೆ ಗರಿಷ್ಠ ಶಿಕ್ಷೆ ಎಷ್ಟು ಗೊತ್ತೇ!