ನವದೆಹಲಿ: ಒಡಿಶಾ ರೈಲು ದುರಂತದ ಬಗ್ಗೆ ರೈಲ್ವೆ ಮಂಡಳಿಯ ಸದಸ್ಯೆ ಜಯವರ್ಮಾ ಸಿನ್ಹಾ ಭಾನುವಾರ ಮಹತ್ವದ ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಭಾಗಿಯಾಗಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಗಾಯಾಳು ಲೋಕೋ ಪೈಲಟ್ ಗ್ರೀನ್ ಸಿಗ್ನಲ್ ಪಡೆದ ನಂತರವೇ ರೈಲು ಮುಂದೆ ಸಾಗಿದೆ. ಗೂಡ್ಸ್ ರೈಲು ಹಳಿ ತಪ್ಪಿರಲಿಲ್ಲ. ಗೂಡ್ಸ್ ರೈಲು ಕಬ್ಬಿಣದ ಅದಿರುಗಳನ್ನು ಸಾಗಿಸುತ್ತಿದ್ದ ಪರಿಣಾಮ ಗರಿಷ್ಠ ಹಾನಿ ಕೋರಮಂಡಲ್ ಎಕ್ಸ್‌ಪ್ರೆಸ್‌ಗೆ ಆಗಿದೆ. ಇದು ಅಪಾರ ಸಂಖ್ಯೆಯ ಸಾವು ಮತ್ತು ನೋವಿಗೆ ಕಾರಣವಾಗಿದೆ ಎಂದು ವಿವರಿಸಿದ್ದಾರೆ.
ದೆಹಲಿಯಲ್ಲಿ ಭಾನುವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ರೈಲ್ವೆ ಮಂಡಳಿಯ ಆಪರೇಷನ್ ಮತ್ತು ಬ್ಯುಸಿನೆಸ್ ಡೆವಲಪ್‌ಮೆಂಟ್ ಸದಸ್ಯರಾದ ಜಯವರ್ಮಾ ಸಿನ್ಹಾ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಚಾಲಕನ ಪ್ರಕಾರ ಯಾವುದೇ ಸಿಗ್ನಲ್ ಜಂಪ್ ಮಾಡಿಲ್ಲ ಅಥವಾ ರೈಲು ಅತಿವೇಗದಿಂದಲೂ ಬಂದಿಲ್ಲ. ಹಳಿತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ನ ಬೋಗಿಗಳು ಡೌನ್‌ಲೈನ್‌ನಲ್ಲಿ ಬಿದ್ದಿವೆ. ಈ ಡೌನ್‌ಲೈನ್‌ನಿಂದ ಗಂಟೆಗೆ 126 ಕಿ.ಮೀ ವೇಗದಲ್ಲಿ ದಾಟುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ನ ಕೊನೆಯ ಎರಡು ಬೋಗಿಗಳಿಗೆ ಕೋರಮಂಡಲ್ ಬೋಗಿಗಳು ಡಿಕ್ಕಿ ಹೊಡೆದಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರೈಲ್ವೆ ಮಂಡಳಿ
ಒಡಿಶಾ ರೈಲು ಅಪಘಾತಕ್ಕೆ ಸಿಗ್ನಲಿಂಗ್ ಸಮಸ್ಯೆ ಕಾರಣ ಎಂದ ಅವರು, ಕೋರಮಂಡಲ್ ಎಕ್ಸ್‌ಪ್ರೆಸ್ ಮಾತ್ರ ಅಪಘಾತಕ್ಕೆ ಒಳಗಾಗಿದೆ ಎಂದು ಒತ್ತಿ ಹೇಳಿದ್ದಾರೆ. ಅಲ್ಲದೇ, ರೈಲ್ವೆ ಸುರಕ್ಷತಾ ಆಯುಕ್ತರ ವಿಸ್ತೃತ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ. ಸುರಕ್ಷತೆಯೇ ಪ್ರಮುಖ ಆದ್ಯತೆಯಾಗಿದೆ. ಸಾಕ್ಷ್ಯಗಳನ್ನು ಹಾಳು ಮಾಡದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಯಾವುದೇ ಸಾಕ್ಷಿಗಳು ಯಾವ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.