ಬಾಲಸೋರ್ (ಒಡಿಶಾ):ತಮ್ಮ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರ ಡಿಜೆ ಸೌಂಡ್ ಅಬ್ಬರಕ್ಕೆ ಕೋಳಿ ಫಾರಂನ 63 ಕೋಳಿಗಳು ಮೃತಪಟ್ಟಿವೆ ಎಂದು ಆರೋಪಿಸಿ ಪೌಲ್ಟ್ರಿ ಮಾಲೀಕ ಎಫ್‌ಐಆರ್ ದಾಖಲಿಸಿದ್ದಾರೆ.
ಒಡಿಶಾದ ಬಾಲಸೋರ್ ಜಿಲ್ಲೆಯ ಕಂದಗರಡಿ ಗ್ರಾಮದ ರಂಜಿತ್ ಪರಿದಾ ಎಂಬವರು ನೀಲಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಭಾನುವಾರ ರಾತ್ರಿ ತಮ್ಮೂರಿನಲ್ಲಿ ನಡೆದ ಮದುವೆ ಸಮಾರಂಭದ ವೇಳೆ ಜೋರಾಗಿ ಡಿಜೆ ಹಾಡುಗಳನ್ನು ಹಾಕಲಾಗಿದ್ದು, ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರು. ನನ್ನ ಪೌಲ್ಟ್ರಿಯಲ್ಲಿದ್ದ ಕೋಳಿಗಳು ಈ ಶಬ್ಧಕ್ಕೆ ಬೆಚ್ಚಿಬಿದ್ದ ಕಾರಣ ನಾನು ಸೌಂಡ್ ಕಡಿಮೆ ಮಾಡಲು ವಿನಂತಿಸಿದೆ. ಆದರೆ ಅಲ್ಲಿದ್ದ ಕೆಲವರು ಕುಡಿದು ಬಂದು ನನ್ನನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಕೋಳಿಗಳು ಭಯದಿಂದ ಓಡಲು ಪ್ರಾರಂಭಿಸಿದವು ಮತ್ತು ಒಂದು ಗಂಟೆಯ ನಂತರ 63 ಕೋಳಿಗಳು ಮೃತಪಟ್ಟವು ಎಂದು ರಂಜಿತ್ ಆರೋಪಿಸಿದ್ದಾರೆ.
ಇದನ್ನೂ ಓದಿ: ಅಣೆಕಟ್ಟೆಯಿಂದ ಹೊರಬಿಟ್ಟ ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋದ ಪತಿ: ಪತ್ನಿಯಿಂದ ಹುಡುಕಾಟ
ಸುಮಾರು 180 ಕೆಜಿಯ ಕೋಳಿಗಳನ್ನು ನಾನು ಕಳೆದುಕೊಂಡೆ. ಮರುದಿನ ಬೆಳಿಗ್ಗೆ ವಧುವಿನ ಕುಟುಂಬದ ಬಳಿ ಪರಿಹಾರ ನೀಡಲು ಕೇಳಿಕೊಂಡಿದ್ದು, ಇದಕ್ಕೆ ಅವರು ನಿರಾಕಸರಿಸಿದ್ದಾರೆ. ಹೀಗಾಗಿ ಪ್ರಕರಣ ದಾಖಲಿಸಿರುವುದಾಗಿ ರಂಜಿತ್ ಹೇಳಿದ್ದಾರೆ. ನೀಲಗಿರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದ್ರೌಪದಿ ದಾಸ್ ಅವರು ದೂರಿನ ಮೇರೆಗೆ ಪರಿದಾ ಮತ್ತು ವಧುವಿನ ಮನೆಯವರನ್ನು ಚರ್ಚೆಗೆ ಕರೆದಿದ್ದಾರೆ.
ಪ್ರಾಣಿಗಳ ವರ್ತನೆಯ ಕುರಿತು ಪುಸ್ತಕವನ್ನು ಬರೆದಿರುವ ಖ್ಯಾತ ಪ್ರಾಣಿಶಾಸ್ತ್ರ ಪ್ರಾಧ್ಯಾಪಕ ಸೂರ್ಯಕಾಂತ ಮಿಶ್ರಾ ಹೇಳುವ ಪ್ರಕಾರ, ಅತಿಯಾದ, ಜೋರಾದ ಶಬ್ಧವು ಪ್ರಾಣಿ-ಪಕ್ಷಿಗಳ ಹೃದಯರಕ್ತನಾಳದ ಮೇಲೆ ಪರಿಣಾಮ ಬೀರಿ, ಅಪಾಯಗಳನ್ನು ಹೆಚ್ಚಿಸುತ್ತದೆ. ಹಗಲು ವೇಳೆ ಸಕ್ರಿಯವಾಗಿರುವ ಕೋಳಿಗಳು ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತವೆ. ರಾತ್ರಿಯಲ್ಲಿನ ಜೋರಾದ ಶಬ್ಧ ಅವುಗಳ ಸಾವಿಗೆ ಕಾರಣವಾಗಹುದು.