ಭುವನೇಶ್ವರ್ (ಒಡಿಶಾ):ದೇಶ ಕಂಡ ಭೀಕರ ರೈಲು ದುರಂತದಲ್ಲಿ ಒಂದಾದ ಒಡಿಶಾದ ಬಾಲಸೋರ್ ತ್ರಿವಳಿ ರೈಲು ಅಪಘಾತಕ್ಕೆ ಕೋಮು ಬಣ್ಣ ನೀಡುವ ವದಂತಿಗಳನ್ನು ಹರಡುವುದನ್ನು ನಿಲ್ಲಿಸುವಂತೆ ಒಡಿಶಾ ಪೊಲೀಸರು ಭಾನುವಾರ ಮನವಿ ಮಾಡಿದ್ದಾರೆ. ಇದೇ ವೇಳೆ ಕೋಮು ಸೌಹಾರ್ದತೆ ಕದಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೂ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಡೆದ ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ರೈಲ್ವೆ ನಿಲ್ದಾಣ ಸಮೀಪ ನಡೆದ ಮೂರು ರೈಲುಗಳ ಅಪಘಾತದಲ್ಲಿ 275 ಜನ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಂದಾಜು 1,175ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಈ ರೈಲು ದುರಂತಕ್ಕೆ ಕೋಮು ಬಣ್ಣ ಬಳಿಯುವ ಕೆಲಸವನ್ನು ಕೆಲ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಹೀಗಾಗಿ ಇದರಿಂದ ಎಚ್ಚೆತ್ತ ಒಡಿಶಾ ಪೊಲೀಸರು ಸುಳ್ಳು ವದಂತಿಗಳು ಹರಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ರೈಲು ದುರಂತದಲ್ಲಿ ಮೃತರ ಸಂಖ್ಯೆ 288 ಅಲ್ಲ, 275.. ಗಾಯಗೊಂಡವರು 1,175 ಮಂದಿ: ಒಡಿಶಾ ಸರ್ಕಾರ
ಪೊಲೀಸರ ಟ್ವೀಟ್ನಲ್ಲಿ ಏನಿದೆ?: ಈ ಬಗ್ಗೆ ಒಡಿಶಾ ಸರ್ಕಾರದ ಪೊಲೀಸ್ ಇಲಾಖೆಯ ಅಧಿಕೃತ ಟ್ವಟರ್ ಖಾತೆಯಲ್ಲಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ''ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಕೋಮು ಬಣ್ಣವನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಅತ್ಯಂತ ದುರದೃಷ್ಟಕರ'' ಎಂದು ಟ್ವೀಟ್ ಮಾಡಲಾಗಿದೆ. ಮುಂದುವರೆದು, ''ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್‌ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ಅಲ್ಲದೇ, ವದಂತಿಗಳನ್ನು ಹರಡುವ ಮೂಲಕಕೋಮು ಸೌಹಾರ್ದತೆ ಕದಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲು ಪ್ರಾರಂಭಿಸಲಾಗುವುದು" ಎಂದು ಟ್ವೀಟ್ ಮಾಡಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.