ಭುವನೇಶ್ವರ :ಪ್ರಸಿದ್ಧ ಕೊನಾರ್ಕ್ ಸೂರ್ಯ ದೇವಾಲಯದಲ್ಲಿ ಸುಂದರೀಕರಣ ಕಾರ್ಯ ಮತ್ತು ಅದರ ಪರಿಧಿಯ ಅಭಿವೃದ್ಧಿಗೆ ಪಾರಂಪರಿಕ ಯೋಜನೆಯನ್ನು ಕೈಗೊಳ್ಳುವುದಾಗಿ ಒಡಿಶಾ ಸರ್ಕಾರ ಗುರುವಾರ ಪ್ರಕಟಿಸಿದೆ.
ಸೂರ್ಯ ದೇವರಿಗೆ ಮೀಸಲಾಗಿರುವ ಈ ದೇವಾಲಯವನ್ನು ವಿಶ್ವ ಪರಂಪರೆಯ ತಾಣವೆಂದು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) 1984 ರಲ್ಲಿ ಘೋಷಿಸಿತು.
ವಿಶ್ವ ಪ್ರಸಿದ್ಧಿ ಸೂರ್ಯ ದೇವಾಲಯದ ಆವರಣ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸರ್ಕಾರಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ‘ಕೊನಾರ್ಕ್ ಹೆರಿಟೇಜ್ ಏರಿಯಾ ಡೆವಲಪ್ಮೆಂಟ್’ ಯೋಜನೆಯ ವಿಧಾನಗಳ ಬಗ್ಗೆ ಚರ್ಚಿಸಿದರು. ದೇವಾಲಯದ ಮೂಲಸೌಕರ್ಯ ಸೌಲಭ್ಯಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ ಕರಡು ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಪಟ್ನಾಯಕ್, ಕೊನಾರ್ಕ್ ದೇವಾಲಯವು ಅಂತಾರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ಈ ದೇವಾಲಯದ ಕಲೆ, ಶಿಲ್ಪಕಲೆ ಮತ್ತು ಕರಕುಶಲತೆಯಿಂದ ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶ್ವದಾದ್ಯಂತ ಲಕ್ಷಾಂತರ ಜನರು ಪ್ರಸಿದ್ಧ ಸೂರ್ಯ ದೇವಾಲಯಕ್ಕೆ ಭೇಟಿ ನೀಡುತ್ತಿರುವುದರಿಂದ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಸರಿಹೊಂದುವಂತೆ ಮೂಲಸೌಕರ್ಯ ಹಾಗೂ ಅದರ ಪರಿಧಿಯನ್ನು ಅಭಿವೃದ್ಧಿಪಡಿಸಲು ಅವಶ್ಯಕವಾಗಿದೆ ಎಂದರು.
ಯುನೆಸ್ಕೋ ಕೊನಾರ್ಕ್ ಅನ್ನು ವಿಶ್ವ ಪರಂಪರೆಯ ತಾಣವೆಂದು ಗುರುತಿಸಿದೆ. ಈ ಮಹಾನ್ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವುದು ನಮ್ಮೆಲ್ಲರ ನೈತಿಕ ಜವಾಬ್ದಾರಿಯಾಗಿದೆ ಎಂದು ಸಿಎಂ ಹೇಳಿದರು.
ವಿಶ್ವ ಪ್ರಸಿದ್ಧಿ ಸೂರ್ಯ ದೇವಾಲಯದ ಆವರಣ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಮತ್ತು ದೇವಾಲಯದ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆಯ ಗುರಿ ಆಗಿದೆ. ಆರು ಪಥದ ಔಟರ್ ರಿಂಗ್ ರಸ್ತೆಯ ನಿರ್ಮಾಣ ಜೊತೆ ದೇವಾಲಯಕ್ಕೆ ಹೋಗುವ ಎಲ್ಲ ರಸ್ತೆಗಳ ಅಭಿವೃದ್ಧಿ ಪಡಿಸಲಾಗುವುದು. ಪ್ರವಾಸಿಗರನ್ನು ಸ್ವಾಗತಿಸಲು ಕೊನಾರ್ಕ್ ಎಂಟ್ರಿ ಪ್ಲಾಜಾವನ್ನು ನಿರ್ಮಿಸಲಾಗುವುದು. ದೇವಾಲಯದ ಮುಂಭಾಗದಲ್ಲಿ ಸುಮಾರು 30 ಎಕರೆ ಭೂಮಿಯನ್ನು ಪ್ರವಾಸಿಗರಿಗಾಗಿ ವಾಯು ವಿವಾಹರಕ್ಕೆ ಮೀಸಲಿಡಲಾಗುವುದು ಎಂದರು.
ಇದಲ್ಲದೆ, ವಾಹನ ನಿಲುಗಡೆಗೆ ಮಲ್ಟಿ - ಮೋಡಲ್ ಹಬ್‌ಗಳಂತಹ ಸೌಲಭ್ಯಗಳನ್ನು ಕೈಗೊಳ್ಳಲಾಗುವುದು. ಕೊನಾರ್ಕ್ ಥಿಯೇಟರ್ ಅನ್ನು ಮರುವಿನ್ಯಾಸಗೊಳಿಸಲಾಗುವುದು. ಪಾದಚಾರಿಗಳಿಗೆ ವಿಶೇಷ ರಸ್ತೆಗಳನ್ನು ಸಹ ನಿರ್ಮಿಸಲಾಗುವುದು ಎಂದು ಒಡಿಶಾ ಸರ್ಕಾರ ಹೇಳಿದೆ.