ಬೆರ್ಹಾಂಪುರ (ಒಡಿಶಾ):ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ನಿತ್ಯ ಸಾವಿರಾರು ಜನರು ತಮ್ಮ ಪ್ರಾಣ ಇದೇ ಕಾರಣಕ್ಕೆ ಕಳೆದುಕೊಳ್ಳುತ್ತಿದ್ದಾರೆ. ಇದರ ಬೆನ್ನಲೇ ಕೆಲವರು ಕೊರೊನಾ ನಿಯಮ ಗಾಳಿಗೆ ತೂರಿ, ಮಹಾಮಾರಿ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.
ಸದ್ಯ ಅಂತಹದೊಂದು ಘಟನೆ ಒಡಿಶಾದ ಬೆರ್ಹಾಂಪುರದಲ್ಲಿ ನಡೆದಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ನೂರಾರು ಮಹಿಳೆಯರು ಕೈಲಾಸ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ನೀರು ತುಂಬಿದ್ದ ಬಿದ್ದಿಗೆ ತಲೆಯ ಮೇಲೆ ಹೊತ್ತು ಕೃಷ್ಣಚೈ ಗ್ರಾಮದ ದೇವಾಲಯ ಸ್ಥಾಪನಾ ಸಮಾರಂಭದಲ್ಲಿ ಅವರು ಭಾಗಿಯಾಗಿದ್ದಾರೆ.
ಈ ಕಾರ್ಯಕ್ರಮದ ವಿಡಿಯೋ ಇದೀಗ ವೈರಲ್ ಆಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರು ಸಹ ಮಾಸ್ಕ್ ಹಾಕಿಕೊಂಡಿಲ್ಲ. ಮಾಹಿತಿ ಪಡೆದುಕೊಂಡಿರುವ ಪೊಲೀಸರು ಸೆಕ್ಷನ್ 144 ಪ್ರಕಾರ ಕ್ರಮ ಕೈಗೊಂಡಿದ್ದು, ಸಮಾರಂಭ ಆಯೋಜನೆ ಮಾಡಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿಗೆ ಬಲಿಯಾದ 7 ತಿಂಗಳ ಗರ್ಭಿಣಿ ವೈದ್ಯೆ.. ಸಾವಿಗೂ ಮುನ್ನ ಮನಕಲಕುವ ವಿಡಿಯೋ!
ಒಡಿಶಾದಲ್ಲೂ ನಿತ್ಯ ಸಾವಿರಾರು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಹೊಸದಾಗಿ 9,793 ಪ್ರಕರಣ ದಾಖಲಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 5,54,666 ಸೋಂಕಿತ ಪ್ರಕರಣಗಳಿವೆ.