ಭುವನೇಶ್ವರ್(ಒಡಿಶಾ):ಬ್ರಿಟನ್ ರಾಣಿ 2ನೇ ಎಲಿಜಬೆತ್ ಹಾಕಿಕೊಳ್ಳುತ್ತಿದ್ದ ಜಗತ್ಪ್ರಸಿದ್ಧ ಕೊಹಿನೂರ್ ವಜ್ರ ಭಾರತಕ್ಕೆ ಸೇರಿದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಜ್ರ ಸಿಕ್ಕಿರುವುದು ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಎಂಬುದು ಕೆಲವರ ವಾದವಾಗಿದೆ. ಆದರೆ, ಈ ಕೊಹಿನೂರ್ ವಜ್ರ ಪುರಿ ಜಗನ್ನಾಥ್ ದೇಗುಲಕ್ಕೆ ಸೇರಿದ್ದು ಎಂಬ ಮಾತು ಇದೀಗ ಕೇಳಿಬಂದಿದೆ.
ರಾಣಿ ಎಲಿಜಬೆತ್ ನಿಧನದ ಬೆನ್ನಲ್ಲೇ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ರಾಜನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ 105 ಕ್ಯಾರೆಟ್ ವಜ್ರದ ಕೀರಿಟವನ್ನು ಅವರ ಪತ್ನಿ ಕಾರ್ನೆವಾಲ್ ಧರಿಸಲಿದ್ದಾರೆ. ಆದರೆ, ಈ ವಜ್ರವನ್ನು ಭಾರತಕ್ಕೆ ವಾಪಸ್ ತರಲು ಸಹಾಯ ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯಲಾಗಿದೆ. ಒಡಿಶಾದಲ್ಲಿರುವ ಸಾಮಾಜಿಕ- ಸಾಂಸ್ಕೃತಿಕ ಸಂಸ್ಥೆವೊಂದು ಮನವಿ ಮಾಡಿದ್ದು, ಕೊಹಿನೂರ್ ವಜ್ರವನ್ನು ಐತಿಹಾಸಿಕ ಪುರಿ ದೇವಸ್ಥಾನಕ್ಕೆ ಹಿಂದಿರುಗಿಸಲು ಸಹಾಯ ಮಾಡುವಂತೆ ದ್ರೌಪದಿ ಮುರ್ಮು ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಭಾರತದ ಕೊಹಿನೂರ್ ಸೇರಿ ಬ್ರಿಟನ್ ದೋಚಿದ ಅಮೂಲ್ಯ ವಸ್ತುಗಳ್ಯಾವುವು ಗೊತ್ತೇ?
ಕೊಹಿನೂರ್ ವಜ್ರ ಪುರಿ ಜಗನ್ನಾಥ್ ದೇಗುಲಕ್ಕೆ ಸೇರಿದ್ದು, ಈ ಹಿಂದೆ ಮಹಾರಾಜ ರಂಜಿತ್ ಸಿಂಗ್ ಅವರು ತಮ್ಮ ಇಚ್ಛೆಯ ಮೇರೆಗೆ ಇದನ್ನು ಜಗನ್ನಾಥ್ ದೇಗುಲಕ್ಕೆ ದಾನವಾಗಿ ನೀಡಿದ್ದರು. ಸದ್ಯ ಇಂಗ್ಲೆಂಡ್ ರಾಜಮನೆತದಲ್ಲಿದೆ. ಅದನ್ನು ಭಾರತಕ್ಕೆ ವಾಪಸ್ ತರಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ಅವರ ಬಳಿ ವಿನಂತಿ ಮಾಡಿಕೊಳ್ಳುವಂತೆ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಯ ಸಂಚಾಲಕ ಪ್ರಿಯಾ ದರ್ಶನ್ ಪಟ್ನಾಯಕ್ ಪತ್ರದಲ್ಲಿ ತಿಳಿಸಿದ್ದಾರೆ.
ಪಂಜಾಬ್ನ ಮಹಾರಾಜ್ ರಂಜಿತ್ ಸಿಂಗ್ ಅವರು ಅಫ್ಘಾನಿಸ್ತಾನದ ನಾದಿರ್ ಶಾ ವಿರುದ್ಧ ಯುದ್ಧದಲ್ಲಿ ಗೆದ್ದ ಬಳಿಕ ಪುರಿ ಜಗನ್ನಾಥ್ ದೇಗುಲಕ್ಕೆ ಈ ವಜ್ರ ದಾನವಾಗಿ ನೀಡಿದ್ದರು ಎಂದು ಪಟ್ನಾಯಕ್ ತಿಳಿಸಿದ್ದಾರೆ. 1839ರಲ್ಲಿ ರಂಜಿತ್ ಸಿಂಗ್ ನಿಧನರಾದರು. ಇದಾದ 10 ವರ್ಷಗಳ ಬಳಿಕ ಅವರ ಮಗ ದುಲೀಪ್ ಸಿಂಗ್ನಿಂದ ಬ್ರಿಟಿಷರು ಕೊಹಿನೂರ್ ವಜ್ರ ಕಿತ್ತುಕೊಂಡಿದ್ದರು. ಆದರೆ, ಇದನ್ನು ಪುರಿ ಜಗನ್ನಾಥ್ನಿಗೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.
ಈ ಹಿಂದೆ ಒಡಿಶಾದ ಆಡಳಿತಾರೂಢ ಬಿಜು ಜನತಾದಳ(ಬಿಜೆಡಿ) ಸಂಸದ ಭೂಪಿಂದರ್ ಸಿಂಗ್ 2016ರಲ್ಲಿ ರಾಜ್ಯಸಭೆಯಲ್ಲಿ ಕೊಹಿನೂರ್ ವಜ್ರ ವಾಪಸ್ ತರುವ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದರು. ಪುರಿ ಬಿಜೆಪಿ ಶಾಸಕ ಜಯಂತ್ ಸಾರಂಗಿ ಕೂಡ ಒಡಿಶಾ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದರು.
ವಿಶ್ವದ ಅತ್ಯಮೂಲ್ಯ ವಜ್ರಗಳಲ್ಲಿ ಒಂದೆಂದು ಈ ಕೊಹಿನೂರ್ ವಜ್ರವನ್ನು ಪರಿಗಣಿಸಲಾಗ್ತದೆ. 14ನೇ ಶತಮಾನದಲ್ಲಿ ಕರ್ನಾಟಕದ ಕೊಳ್ಳುರು(ಯಾದಗಿರಿ ಜಿಲ್ಲೆ) ಗಣಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದ ಸಮಯದಲ್ಲಿ ಇದು ಸಿಕ್ಕಿತ್ತು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ. ಇದರ ಮೌಲ್ಯ ಬರೋಬ್ಬರಿ 4,500 ಕೋಟಿ ರೂ. ಎಂದು ಹೇಳಲಾಗುತ್ತಿದೆ.