ಭಾಗಲ್ಪುರ್ (ಬಿಹಾರ): ಬಿಹಾರದ ಪಾಟ್ನಾ ರೈಲ್ವೇ ನಿಲ್ದಾಣದಲ್ಲಿ ಅಳವಡಿಸಿದ್ದ ಟಿವಿ ಪರದೆಯಲ್ಲಿ ಅಶ್ಲೀಲ ವಿಡಿಯೋ ಪ್ರಸಾರವಾದ ಕೆಲವು ದಿನಗಳ ನಂತರ ಇಲ್ಲಿನ ಭಾಗಲ್ಪುರ ಸ್ಟೇಷನ್ ಚೌಕ್ ಬಳಿ ಇರುವ ಟಿವಿ ಪರದೆ ಮೇಲೆ ಆಶ್ಲೀಲ ಪದಗಳನ್ನು ಪ್ರದರ್ಶಿಸಿರುವ ಘಟನೆ ನಡೆದಿದೆ. ಸುಮಾರು 5 ರಿಂದ 10 ನಿಮಿಷಗಳ ಕಾಲ ಆಶ್ಲೀಲ ಪದಗಳು ಪ್ರಸಾರವಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ದಾರಿಹೋಕರು ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೆಲವರು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಪರದೆಯನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ. ಉಪವಿಭಾಗಾಧಿಕಾರಿ (ಎಸ್ಡಿಓ) ಧನಂಜಯ್ ಕುಮಾರ್ ಮತ್ತು ಉಪ ಪೊಲೀಸ್ ಅಧೀಕ್ಷಕ ಅಜಯ್ಕುಮಾರ್ ಚೌಧರಿ ಪ್ರತಿಕ್ರಿಯಿಸಿ, ಪ್ರಕರಣ ಸಂಬಂಧ ತನಿಖೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿ ಕನ್ಹಯ್ಯಾ ಯಾದವ್ ಮಾತನಾಡಿ, ರಾತ್ರಿ 10 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತರು ಸ್ಟೇಷನ್ ಚೌಕ್ ಬಳಿ ನಿಂತಿದ್ದಾಗ ಭೀಮರಾವ್ ಅಂಬೇಡ್ಕರ್ ಪ್ರತಿಮೆಯ ಮೇಲಿರುವ ಟಿವಿ ಪರದೆಯ ಮೇಲೆ ಅಶ್ಲೀಲ ಪದಗಳು ಪ್ರಸಾರಗೊಂಡಿವೆ. ಸುಮಾರು 5 ರಿಂದ 10 ನಿಮಿಷಗಳ ಕಾಲ ಪ್ರದರ್ಶನವಾಗಿದೆ. ತಕ್ಷಣವೇ ನಾವು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.