ಡೆಹ್ರಾಡೂನ್:ಯೋಗ ಗುರು ಹಾಗೂ ಉದ್ಯಮಿ ಬಾಬಾ ರಾಮದೇವ್ ಅವರು ಮಹಿಳೆಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆ ಸ್ಪಷ್ಟನೆ ಕೋರಿ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡಿದೆ. ಪ್ರತಿಕ್ರಿಯೆ ನೀಡಲು ಆಯೋಗ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.
ಶುಕ್ರವಾರ ಥಾಣೆಯಲ್ಲಿ ನಡೆದ ಸಮಾರಂಭದಲ್ಲಿ ಬಾಬಾ ರಾಮದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್ ಸೂಟ್‌ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ, ಮತ್ತು ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿ ಕಾಣುತ್ತಾರೆ ಎಂದು ಹೇಳಿದ್ದರು. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಮತ್ತು ಲೋಕಸಭಾ ಸಂಸದ ಶ್ರೀಕಾಂತ್ ಶಿಂಧೆ ಕೂಡ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಾಬಾ ರಾಮ್‌ದೇವ್ ಅವರ ಈ ಹೇಳಿಕೆಗೆ ಸಂಬಂಧಿಸಿದಂತೆ ಬಂದ ದೂರನ್ನು ಮಹಾರಾಷ್ಟ್ರ ಮಹಿಳಾ ಆಯೋಗವು ಪರಿಗಣನೆಗೆ ತೆಗೆದುಕೊಂಡಿದೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಆಯೋಗ ಹೇಳಿದೆ. ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಬಾಬಾ ರಾಮದೇವ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ರಾಜ್ಯ ಮಹಿಳಾ ಆಯೋಗ, 1993 ರ ಸೆಕ್ಷನ್ 12 (2) ಮತ್ತು 12 (3) ರ ಅಡಿಯಲ್ಲಿ, ಈ ಹೇಳಿಕೆಗೆ ಸಂಬಂಧಿಸಿದಂತೆ ವಿವರಣೆಯನ್ನು ನೀಡಲು ಅವರಿಗೆ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲೂ ಬಾಬಾ ರಾಮದೇವ್ ಅವರ ಈ ಹೇಳಿಕೆಗೆ ಹಲವು ಪ್ರತಿಕ್ರಿಯೆಗಳು ಬರುತ್ತಿವೆ. ಬಾಬಾ ರಾಮ್‌ದೇವ್ ಅವರ ಹೇಳಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯ ಪತ್ನಿಯ ಮುಂದೆ ಬಾಬಾ ರಾಮ್‌ದೇವ್ ಅವರು ಮಹಿಳೆಯರ ಬಗ್ಗೆ ಮಾಡಿದ ಟೀಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಎಲ್ಲಾ ಮಹಿಳೆಯರಿಗೆ ನೋವಾಗಿದೆ, ಬಾಬಾ ರಾಮದೇವ್ ಅವರು ಈ ಹೇಳಿಕೆಯ ಬಗ್ಗೆ ದೇಶದ ಕ್ಷಮೆಯಾಚಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಕನಕಗಿರಿಯ ಚಿದಾನಂದವಧೂತರ ಸಮಾಧಿ ಸ್ಥಳಕ್ಕೆ ಬಾಬಾ ರಾಮದೇವ್ ಭೇಟಿ