ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಹಾಕಿರುವುದಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. 6 ಮಂದಿಯನ್ನು ಬಂಧಿಸಲಾಗಿದೆ. ವಿವಿಧ ಉದ್ಯಾನವನಗಳು, ಮಾರುಕಟ್ಟೆಗಳು ಮತ್ತು ಕಾಲೋನಿಗಳ ಗೋಡೆಗಳ ಮೇಲೆ ಅಂಟಿಸಲಾದ ಪೋಸ್ಟರ್‌ಗಳಲ್ಲಿ ಮೋದಿ ವಿರುದ್ಧದ ಘೋಷಣೆಗಳನ್ನು ಬರೆಯಲಾಗಿದೆ.
ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್‌ನ ವಿವರಗಳಿಲ್ಲ. 44,000 ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರ ವಿರುದ್ಧ ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಪ್ರಾಪರ್ಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿ ಸಿ.ಪಿ.ದೀಪೇಂದ್ರ ಪಾಠಕ್ ತಿಳಿಸಿದರು.
ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರ ಬಂದ ವಾಹನವನ್ನು ತಡೆದು ಪರಿಶೀಲಿಸಲಾಗಿದೆ. ಅದರಲ್ಲಿಯೂ ಪ್ರಧಾನಿ ವಿರುದ್ಧದ ಪೋಸ್ಟರ್ಗಳಿದ್ದವು. ಬಂಧಿತ 6 ಜನರಿಂದಲೂ ಪೋಸ್ಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ಪೋಸ್ಟರ್‌ಗಳನ್ನು ಯಾರ ಸೂಚನೆಯ ಮೇರೆಗೆ ಹಾಕಲಾಗಿದೆ. ಅವರ ಉದ್ದೇಶವೇನು ಎಂಬುದರ ಕುರಿತು ದೆಹಲಿ ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳನ್ನು ದೆಹಲಿ ಪೊಲೀಸ್ ತಂಡ ವಿಚಾರಣೆ ನಡೆಸುತ್ತಿದೆ. ಪೋಸ್ಟರ್‌ಗಳ ಹಿಂದೆ ಆಮ್ ಆದ್ಮಿ ಪಕ್ಷ ಅಥವಾ ಇತರ ಯಾವುದೇ ವಿರೋಧ ಪಕ್ಷಗಳ ನಾಯಕರು ಇದ್ದಾರೆಯೇ ಎಂಬುದನ್ನು ಆರೋಪಿಗಳಿಂದ ಬಾಯಿಬಿಡಿಸುವ ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ.
ದೆಹಲಿಯ ಹಲವು ಭಾಗಗಳಲ್ಲಿ "ಮೋದಿ ಹಟಾವೋ ದೇಶ್ ಬಚಾವೋ (ಮೋದಿಯನ್ನು ತೆಗೆದುಹಾಕಿ, ದೇಶವನ್ನು ಉಳಿಸಿ) ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಅಥವಾ ಪ್ರಕಾಶಕರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ. ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಆಸ್ತಿ ವಿರೂಪ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ವೀಟ್ ಮಾಡಿ ಆಪ್ ಪ್ರಶ್ನೆ:ಭಿತ್ತಿಚಿತ್ರಗಳ ವಿರುದ್ಧ ಕೇಸ್ ದಾಖಲಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಆಮ್ ಆದ್ಮಿ ಪಕ್ಷ, ಕೇವಲ ಪೋಸ್ಟರ್ಗಳಿಗೆ ಮೋದಿ ಹೆದರೋದೇಕೆ?. ಇದು ಸರ್ವಾಧಿಕಾರಿ ಧೋರಣೆಯಾಗಿದೆ. ಪ್ರಧಾನಿ ವಿರುದ್ಧ ಪೋಸ್ಟರ್ ಹಾಕಿದ ಕಾರಣಕ್ಕಾಗಿ 100 ಕೇಸ್ ದಾಖಲಿಸಿದ್ದು ಸರಿಯಲ್ಲ. ಪ್ರಧಾನಿಗಳೇ ನಿಮಗೆ ಬಹುಶಃ ತಿಳಿದಿರಲಿಕ್ಕಿಲ್ಲ. ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಒಂದು ಪೋಸ್ಟರ್ಗೆ ಇಷ್ಟು ಹೆದರಿರೋದು ಏಕೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದೆ.
ಕೋವಿಡ್ ವೇಳೆ ನಡೆದಿದ್ದ ಪೋಸ್ಟರ್ ಗಲಾಟೆ:ಇದಕ್ಕೂ ಮೊದಲು ಅಂದರೆ ಕೋವಿಡ್ ಸಾಂಕ್ರಾಮಿಕದ ವೇಳೆಯೂ ಸೋಂಕಿನ ನಿರ್ವಹಣೆ ಮತ್ತು ಲಸಿಕೆಗಳ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ನಿಂದಿಸಿ ದೆಹಲಿಯ ಅನೇಕ ಕಡೆಗಳಲ್ಲಿ ಭಿತ್ತಿಚಿತ್ರಗಳನ್ನು ಅಂಟಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಅಂದು 17 ಜನರನ್ನು ಬಂಧನಕ್ಕೆ ಒಳಪಡಿಸಲಾಗಿತ್ತು. ಇದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಕಿತ್ತಾಟಕ್ಕೆ ಕಾರಣವಾಗಿತ್ತು.
ಪೋಸ್ಟರ್ ಗಲಾಟೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನನ್ನನ್ನೂ ಬಂಧಿಸಿ ಎಂದು ಟ್ವೀಟ್ ಮಾಡಿ ಸವಾಲು ಎಸೆದಿದ್ದರು. ಮೋದಿ ಅವರು ನಮ್ಮ ಮಕ್ಕಳಿಗಾಗಿ ಮೀಸಲಿರಿಸಿದ್ದ ಲಸಿಕೆಗಳನ್ನು ಏಕೆ ವಿದೇಶಕ್ಕೆ ಕಳುಹಿಸುತ್ತಿದ್ದಾರೆ ಎಂದು ಪ್ರಶ್ನಿಸಿ ನಗರದ ಅನೇಕ ಭಾಗಗಳಲ್ಲಿ ಭಿತ್ತಿಚಿತ್ರಗಳನ್ನು ಅಂಟಿಸಲಾಗಿತ್ತು.
ಇದನ್ನೂ ಓದಿ:ಬೋಗಸ್ ಷೇರು ಮಾರಾಟ: 28 ವರ್ಷ ತಲೆಮರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಸೆರೆ!