ನವದೆಹಲಿ:ಒಬಿಸಿ ಮೀಸಲಿಗೆ(OBC bill) ಸಂಬಂಧಿಸಿದ ಸಂವಿಧಾನದ 127ನೇ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ಲೋಕಸಭೆ ಅನುಮೋದನೆ ಸಿಕ್ಕಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯಸಭೆಯಲ್ಲೂ ಯಾವುದೇ ರೀತಿಯ ವಿರೋಧ ವ್ಯಕ್ತವಾಗದೇ ಈ ವಿಧೇಯಕಕ್ಕೆ ಜೈಕಾರ ಹಾಕಲಾಗಿದೆ.
ಈ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಸಿಕ್ಕ ತಕ್ಷಣ ಕಾನೂನಾಗಿ ಜಾರಿಗೆ ಬರಲಿದೆ. ಹೀಗೆ ಒಬಿಸಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳು ಪಡೆಯಲು ಈ ಕಾನೂನು ಅನುವು ಮಾಡಿಕೊಡಲಿದೆ.
ಲೋಕಸಭೆಯಲ್ಲಿ ಅಂಗೀಕಾರ ಸಿಗುತ್ತಿದ್ದಂತೆ ಇಂದು ರಾಜ್ಯಸಭೆಯಲ್ಲೂ OBC ಬಿಲ್ ಮಂಡನೆ ಮಾಡಲಾಯಿತು. ಈ ವೇಳೆ, ಯಾವುದೇ ಪ್ರತಿಪಕ್ಷಗಳಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗಿಲ್ಲ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಈ ವಿಧೇಯಕ ಕಾನೂನಾಗಿ ಜಾರಿಗೊಳ್ಳಲಿದೆ.
ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಬಿಲ್
ನಿನ್ನೆ ಈ ಸಂಬಂಧ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಿಧೇಯಕ ಮಂಡಿಸಿದ್ದು, ಈ ವಿಧೇಯಕಕ್ಕೆ ಎಲ್ಲ ಪ್ರತಿಪಕ್ಷಗಳೂ ಬೆಂಬಲ ಕೊಟ್ಟಿವೆ. ವಿಧೇಯಕದ ಪರ 385 ಮತಗಳು ಬಿದ್ದಿವೆ. ವಿಧೇಯಕದ ವಿರುದ್ಧ ಯಾವುದೇ ಮತಗಳು ಚಲಾವಣೆ ಆಗಿಲ್ಲ.
ಈ ಬಿಲ್ ಪಾಸ್ ಆಗಿರುವುದರಿಂದ ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ತಮ್ಮನ್ನು ಒಬಿಸಿ ಲಿಸ್ಟ್ಗೆ ಸೇರಿಸಬೇಕೆಂದು ಎದ್ದಿರುವ ಕೂಗಿಗೆ ತಾರ್ಕಿಕ ಅಂತ್ಯ ಸಿಗುವ ಸಾಧ್ಯತೆ ಇದೆ. ಈಗಾಗಲೇ ಈ ಸಂಬಂಧ ಹಲವು ರಾಜ್ಯಗಳು ಸರ್ವೆಗೂ ಆದೇಶ ಮಾಡಿವೆ.
ಈ ಹಿಂದೆ ರಾಜಸ್ಥಾನದಲ್ಲಿ ಗುಜ್ಜರು, ಹರಿಯಾಣ, ಪಂಜಾಬ್ನಲ್ಲಿ ಜಾಟರು ಭಾರಿ ಪ್ರತಿಭಟನೆ ಮಾಡಿದ್ದರು. ಜಾಟರ್ ಹೋರಾಟವಂತೂ ಹರಿಯಾಣವನ್ನು ರಣರಂಗವಾಗಿಸಿತ್ತು. ಅಷ್ಟೇ ಅಲ್ಲ ಮಹಾರಾಷ್ಟ್ರದಲ್ಲಿ ಮರಾಠರು ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೋರಾಟ ನಡೆಸಿದ್ದರು.