ಕರ್ನಾಟಕ

karnataka

ETV Bharat / bharat

ಒಳ್ಳೆಯ ಸುದ್ದಿ: ದೇಶದಲ್ಲಿ ಅಪೌಷ್ಟಿಕತೆ ಇಳಿಕೆ, ಎದೆಹಾಲು ಕುಡಿಯುವ ಶಿಶುಗಳ ಸಂಖ್ಯೆ ಏರಿಕೆ - ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ

2020ರ ಹೊತ್ತಿಗೆ 5 ವರ್ಷದೊಳಗಿನ ಅಪೌಷ್ಟಿಕ ಮಕ್ಕಳ ಸಂಖ್ಯೆ 36.1 ಮಿಲಿಯನ್​ಗೆ ಇಳಿದಿದೆ. 2012 ಈ ಸಂಖ್ಯೆ 52.3 ಮಿಲಿಯನ್ ಇತ್ತು. 5 ವರ್ಷದೊಳಗಿನ ಅತಿತೂಕ ಹೊಂದಿದ ಮಕ್ಕಳ ಸಂಖ್ಯೆಯು 2020ರಲ್ಲಿ 2.2 ಮಿಲಿಯನ್​ಗೆ ಇಳಿದಿದೆ. 2012 ರಲ್ಲಿ ಈ ಸಂಖ್ಯೆ 3 ಮಿಲಿಯನ್ ಆಗಿತ್ತು.

Etv Bharatಎದೆಹಾಲು ಕುಡಿಯುವ ಶಿಶುಗಳ ಸಂಖ್ಯೆ ಏರಿಕೆ
Etv Bharatಎದೆಹಾಲು ಕುಡಿಯುವ ಶಿಶುಗಳ ಸಂಖ್ಯೆ ಏರಿಕೆ

By

Published : Jul 7, 2022, 1:24 PM IST

ವಿಶ್ವಸಂಸ್ಥೆ: ಕಳೆದ 15 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. 2019-2021ರ ಹೊತ್ತಿಗೆ ದೇಶದಲ್ಲಿ ಅಪೌಷ್ಟಿಕತೆ ಹೊಂದಿರುವವರ ಸಂಖ್ಯೆ 224.3 ಮಿಲಿಯನ್​ಗೆ ಇಳಿದಿದೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಅದೇ ಸಮಯಕ್ಕೆ ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಭಾರತದಲ್ಲಿ, ಬೊಜ್ಜಿನ ಸಮಸ್ಯೆ ಹೊಂದಿರುವ ವಯಸ್ಕರು ಮತ್ತು ರಕ್ತಹೀನತೆಯ ಸಮಸ್ಯೆಯಿಂದ ಬಳಲುವ ಮಹಿಳೆಯರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಇದೇ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ವಿಶ್ವ ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸ್ಥಿತಿಗತಿ ವರದಿ -2022 ಯನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾದ ಆಹಾರ ಮತ್ತು ಕೃಷಿ ಸಂಸ್ಥೆ (FAO), ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ (IFAD), ಯುನಿಸೆಫ್, ವಿಶ್ವ ಆಹಾರ ಕಾರ್ಯಕ್ರಮ (WFP) ಮತ್ತು ವಿಶ್ವ ಆರೋಗ್ಯ ಯೋಜನೆ (WFP) ಈ ವರದಿಯನ್ನು ಜಂಟಿಯಾಗಿ ಬಿಡುಗಡೆ ಮಾಡಿವೆ.

ಈ ವರದಿಯ ಪ್ರಕಾರ, ಜಾಗತಿಕವಾಗಿ ಹಸಿವಿನಿಂದ ಪೀಡಿತರ ಸಂಖ್ಯೆ 2021 ರಲ್ಲಿ 828 ಮಿಲಿಯನ್‌ಗೆ ಏರಿದೆ. ಅಂದರೆ ಹಸಿವಿನಿಂದ ಪೀಡಿತರ ಸಂಖ್ಯೆಯು 2020 ರಿಂದ ಸುಮಾರು 46 ಮಿಲಿಯನ್ ಮತ್ತು ಕೋವಿಡ್​ ಸಾಂಕ್ರಾಮಿಕ ರೋಗ ಹರಡಿದ ನಂತರ 150 ಮಿಲಿಯನ್ ಹೆಚ್ಚಾಗಿದೆ.

ವಯಸ್ಕರಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಳ (ಸಾಂದರ್ಭಿಕ ಫೋಟೋ)

ಭಾರತದಲ್ಲಿ 2004-06ರಲ್ಲಿ 247.8 ಮಿಲಿಯನ್ ಇದ್ದ ಅಪೌಷ್ಟಿಕ ಜನರ ಸಂಖ್ಯೆ 2019-21ರಲ್ಲಿ 224.3 ಮಿಲಿಯನ್‌ಗೆ ಇಳಿದಿದೆ ಎಂದು ವರದಿ ಹೇಳಿದೆ. 2020ರ ಹೊತ್ತಿಗೆ 5 ವರ್ಷದೊಳಗಿನ ಅಪೌಷ್ಟಿಕ ಮಕ್ಕಳ ಸಂಖ್ಯೆ 36.1 ಮಿಲಿಯನ್​ಗೆ ಇಳಿದಿದೆ. 2012 ಈ ಸಂಖ್ಯೆ 52.3 ಮಿಲಿಯನ್ ಇತ್ತು. 5 ವರ್ಷದೊಳಗಿನ ಅತಿತೂಕ ಹೊಂದಿದ ಮಕ್ಕಳ ಸಂಖ್ಯೆಯು 2020ರಲ್ಲಿ 2.2 ಮಿಲಿಯನ್​ಗೆ ಇಳಿದಿದೆ. 2012 ರಲ್ಲಿ ಈ ಸಂಖ್ಯೆ 3 ಮಿಲಿಯನ್ ಆಗಿತ್ತು.

ಭಾರತವು ಸದ್ಯ 1.38 ಬಿಲಿಯನ್ ಜನರನ್ನು ಹೊಂದಿದ ದೇಶವಾಗಿದೆ. 2016ರ ಹೊತ್ತಿಗೆ ಭಾರತದಲ್ಲಿ ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರ ಸಂಖ್ಯೆ 34.3 ಮಿಲಿಯನ್​ಗೆ ಏರಿಕೆಯಾಗಿದೆ. 2012 ರಲ್ಲಿ ಈ ಸಂಖ್ಯೆ 25.2 ಮಿಲಿಯನ್ ಆಗಿತ್ತು. ರಕ್ತಹೀನತೆಯಿಂದ ಬಳಲುವ 15 ರಿಂದ 49 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆ 2019ರ ವೇಳೆಗೆ 187.3 ಮಿಲಿಯನ್​ಗೆ ಏರಿಕೆಯಾಗಿದೆ. 2012 ರಲ್ಲಿ ಈ ಸಂಖ್ಯೆ 171.5 ಮಿಲಿಯನ್ ಇತ್ತು. ಹುಟ್ಟಿದ 5 ತಿಂಗಳುಗಳವರೆಗೆ ಕೇವಲ ಎದೆಹಾಲು ಮಾತ್ರ ಕುಡಿಯುವ ಶಿಶುಗಳ ಸಂಖ್ಯೆ 2020 ರಲ್ಲಿ 14 ಮಿಲಿಯನ್​ಗೆ ಏರಿಕೆಯಾಗಿದೆ. 2012 ರಲ್ಲಿ ಈ ಸಂಖ್ಯೆ 11.2 ಮಿಲಿಯನ್ ಆಗಿತ್ತು.

ಶೇಕಡಾವಾರು ಲೆಕ್ಕದಲ್ಲಿ ನೋಡುವುದಾರೆ, ಭಾರತದಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಅಪೌಷ್ಟಿಕತೆಯ ಪ್ರಮಾಣವು 2004-06 ರಲ್ಲಿ ಶೇಕಡಾ 21.6 ರಷ್ಟಿತ್ತು ಮತ್ತು 2019-21 ರಲ್ಲಿ ಶೇಕಡಾ 16.3 ಕ್ಕೆ ಇಳಿದಿದೆ. 2020 ರಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣವು ಶೇಕಡಾ 30.9 ಕ್ಕೆ ಇಳಿದಿದೆ. 2012 ರಲ್ಲಿ ಇದು ಶೇಕಡಾ 41.7 ರಷ್ಟಿತ್ತು.

ABOUT THE AUTHOR

...view details