ನವದೆಹಲಿ: ಇತ್ತೀಚೆಗೆ ಚುನಾವಣೆ ನಡೆದ ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಪಕ್ಷವು ಈಗ 12 ರಾಜ್ಯಗಳಲ್ಲಿ ಸ್ವಂತವಾಗಿ ಅಧಿಕಾರದಲ್ಲಿರಲಿದೆ. ಹಾಗೆಯೇ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಸೋತ ನಂತರ ದೇಶದ ಎರಡನೇ ಅತಿದೊಡ್ಡ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ನ ಅಧಿಕಾರ ಮೂರು ರಾಜ್ಯಗಳಿಗೆ ಸೀಮಿತವಾಗಲಿದೆ.
ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉತ್ತರಾಖಂಡ್, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸೋಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಇಂದಿನ ಮತ ಎಣಿಕೆಯ ನಂತರ ಮಧ್ಯಪ್ರದೇಶದಲ್ಲಿ ಅಧಿಕಾರ ಮರಳಿ ಪಡೆಯಲಿದೆ ಮತ್ತು ರಾಜಸ್ಥಾನ ಹಾಗೂ ಛತ್ತೀಸಗಢ ರಾಜ್ಯಗಳನ್ನು ಕಾಂಗ್ರೆಸ್ನಿಂದ ಕಸಿದುಕೊಳ್ಳಲು ಸಜ್ಜಾಗಿದೆ. ಇದಲ್ಲದೇ ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮೈತ್ರಿಕೂಟದ ಭಾಗವಾಗಿದೆ.
ಕಾಂಗ್ರೆಸ್ ಈಗ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಮೂರು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿರಲಿದೆ. ಬಿಹಾರ ಮತ್ತು ಜಾರ್ಖಂಡ್ನಲ್ಲಿ ಕಾಂಗ್ರೆಸ್ ಆಡಳಿತ ಮೈತ್ರಿಕೂಟದ ಭಾಗವಾಗಿದೆ ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಮಿತ್ರ ಪಕ್ಷವಾಗಿದೆ. ಆದರೂ ಕಾಂಗ್ರೆಸ್ ಸರ್ಕಾರದಲ್ಲಿ ಭಾಗಿಯಾಗಿಲ್ಲ.