ನವದೆಹಲಿ: ಸುದೀರ್ಘ ಕಾಲದಿಂದ ಇತ್ಯರ್ಥವಾಗದೇ ಉಳಿದುಕೊಂಡಿದ್ದ ಅಸ್ಸೋಂ-ಮೇಘಾಲಯ ನಡುವಿನ ಅಂತರರಾಜ್ಯ ಗಡಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಈಶಾನ್ಯ ರಾಜ್ಯಗಳಾಗಿರುವ ಅಸ್ಸೋಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಶಾಂತಿ ಕಾಪಾಡಲು ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ(AFSPA) ವ್ಯಾಪ್ತಿಯನ್ನು ಕಡಿತಗೊಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಮೂರು ರಾಜ್ಯಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯಗಳಲ್ಲಿ ಉಂಟಾಗುತ್ತಿದ್ದ ಗಲಭೆಯನ್ನು ಶಾಸ್ವತವಾಗಿ ಕೊನೆಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅನೇಕ ಒಪ್ಪಂದಗಳನ್ನು ಜಾರಿಗೆ ತಂದಿದ್ದು, ಇದೀಗ ಎಎಫ್ಎಸ್ಪಿಎ ವ್ಯಾಪ್ತಿ ಕಡಿತಗೊಳಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.