ನುಹ್ (ಹರಿಯಾಣ) :ಹರಿಯಾಣದಲ್ಲಿ ನಡೆದ ಘರ್ಷಣೆಯಲ್ಲಿ ಗೃಹ ರಕ್ಷಕ ದಳದ ಇಬ್ಬರು ಸೇರಿ 6 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. 8 ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗುರುಗ್ರಾಮ್ ಹೊರತುಪಡಿಸಿ ಹೆಚ್ಚಿನ ಪ್ರದೇಶಗಳಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ. ಮುಂದಿನ ಆದೇಶದವರೆಗೆ ನುಹ್ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದರು.
ನಿನ್ನೆಯಿಂದ ನಡೆಯುತ್ತಿರುವ ಘರ್ಷಣೆಗೆ ಹರಿಯಾಣದ 8 ಜಿಲ್ಲೆಗಳು ಹೊತ್ತಿ ಉರಿದಿವೆ. ಈ ಕುರಿತು ಮಾಹಿತಿ ನೀಡಿದ ಸಿಎಂ, ಹಿಂಸಾಚಾರದಲ್ಲಿ ಭಾಗಿಯಾದ 116 ಜನರನ್ನು ಬಂಧಿಸಲಾಗಿದೆ. 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿಂಸಾಚಾರವನ್ನು ನಿಯಂತ್ರಿಸಲು 30 ತುಕಡಿಗಳು ಪೊಲೀಸ್ ಮತ್ತು 20 ಅರೆಸೇನಾ ಪಡೆಗಳನ್ನು ಕೇಂದ್ರದಿಂದ ಕರೆಸಲಾಗಿದೆ. ಈ ಪೈಕಿ ನುಹ್‌ನಲ್ಲಿ 14 ತುಕಡಿಗಳು, 3 ಪಲ್ವಾಲ್‌ಗೆ, 2 ಫರಿದಾಬಾದ್‌ಗೆ ಮತ್ತು ಒಂದನ್ನು ಗುರುಗ್ರಾಮ್‌ನಲ್ಲಿ ನಿಯೋಜಿಸಲಾಗಿದೆ ಎಂದು ಸಿಎಂ ಖಟ್ಟರ್ ತಿಳಿಸಿದರು.
ಗಲಭೆ ಹೊತ್ತಿಕೊಂಡ ರಾಜ್ಯದ 8 ಜಿಲ್ಲೆಗಳಾದ ನುಹ್, ಪಲ್ವಾಲ್, ಫರಿದಾಬಾದ್, ರೆವಾರಿ, ಗುರುಗ್ರಾಮ್, ಮಹೇಂದ್ರಗಢ, ಸೋನಿಪತ್ ಮತ್ತು ಪಾಣಿಪತ್ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಗುರುಗ್ರಾಮ್‌ನಲ್ಲಿ ಗಲಭೆ ಇನ್ನೂ ಮುಂದುವರಿದಿದ್ದು, ಬಿಟ್ಟರೆ ಬೇರೆಡೆ ನಿಯಂತ್ರಿಸಲಾಗಿದೆ. ನುಹ್ ಜಿಲ್ಲೆಯಲ್ಲಿ ಇಂಟರ್ನೆಟ್ ಸೇವೆಗಳನ್ನು ಮುಂದಿನ ಆದೇಶದವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.