ನವದೆಹಲಿ:ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ವಿರುದ್ಧ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್‌ಎಸ್‌ಯುಐ) ಹರಿಹಾಯ್ದಿದ್ದು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಮುಂದೆ 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಲು ಸೂಚಿಸಿದ ಯುಜಿಸಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ವ್ಯಾಕ್ಸಿನೇಷನ್ ಘೋಷಿಸಿದ ಕಾರಣದಿಂದ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು 'ಧನ್ಯವಾದಗಳು ಪ್ರಧಾನಿ ಮೋದಿ' ಎಂದು ಬ್ಯಾನರ್ ಹಾಕಬೇಕೆಂದು ಯುಜಿಸಿ ಆದೇಶಿಸಿತ್ತು. ಈ ರೀತಿಯ ಸೂಚನೆ ನೀಡಿದ್ದಕ್ಕೆ ಎನ್‌ಎಸ್‌ಯುಐ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ನಾಚಿಕೆಯಿಲ್ಲದ ಕಾರ್ಯ ಎಂದು ವ್ಯಂಗ್ಯವಾಡಿದೆ.
ಈ ಕುರಿತು ಮಾತನಾಡಿದ ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ನೀರಜ್ ಲುಂಡನ್ ಯಾವುದಕ್ಕಾಗಿ ಪ್ರಧಾನಿಗೆ ಧನ್ಯವಾದಗಳು? ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸಾಕಷ್ಟು ಹಾನಿ ಮಾಡಿದ್ದರೂ, ಪ್ರಧಾನಿಯ ವರ್ಚಸ್ಸು ಹೆಚ್ಚಿಸಲು ಸರ್ಕಾರ ಗಮನ ಹರಿಸುತ್ತಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.