ನವದೆಹಲಿ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಅವರ ಸರಳ, ಸಜ್ಜನಿಕೆ, ವಾಕ್ಚಾತುರ್ಯವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಈಗ ಅವರು ಮಾಡಿರುವ ಕಾರ್ಯವೊಂದಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗತೊಡಗಿದೆ.
ಎನ್‌ಎಸ್‌ಡಿಎಲ್‌ನ ರಜತ ಮಹೋತ್ಸವದ ನಿಮಿತ್ತ ಶನಿವಾರ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪದ್ಮಜಾ ಚುಂಡೂರು ಅವರು ಭಾಷಣ ಮಾಡುತ್ತಿದ್ದರು.
ಈ ವೇಳೆ ಪದ್ಮಜಾ ಅವರ ಗಂಟಲು ಒಣಗಿ ನೀರು ಕುಡಿಯಬೇಕೆನಿಸಿದೆ. ಆಗ ಡಯಾಸ್‌ನಲ್ಲಿಯೇ ನಿಂತು ಸಿಬ್ಬಂದಿಗೆ ನೀರು ಕೊಡುವಂತೆ ಕೇಳಿದ್ದಾರೆ. ಆದರೆ, ಸಿಬ್ಬಂದಿ ಅನತಿ ದೂರದಲ್ಲಿ ಇದ್ದುದರಿಂದ ಬರುವುದು ತಡವಾಗಿದೆ. ನಿರ್ಮಲಾ ಸೀತಾರಾಮನ್ ಅವರು ತಡ ಮಾಡದೇ ಎದ್ದು ತಮ್ಮ ಎದುರಿನಲ್ಲಿಟ್ಟಿದ್ದ ನೀರಿನ ಬಾಟಲಿಯನ್ನು ಡಯಾಸ್‌ನಲ್ಲಿದ್ದ ಪದ್ಮಜಾ ಅವರಿಗೆ ಕೊಟ್ಟು ದಾಹ ನೀಗಿಸಿದ್ದಾರೆ.
ಕೇಂದ್ರ ಮಂತ್ರಿಯೊಬ್ಬರು ತಮಗೆ ನೀರು ಕೊಟ್ಟಿದ್ದನ್ನು ಕಂಡು ನಿರ್ದೇಶಕಿ ಪದ್ಮಜಾ ಚುಂಡೂರು ಕೃತಜ್ಞತೆ ಅರ್ಪಿಸಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತಾವೊಬ್ಬ ಕೇಂದ್ರ ಮಂತ್ರಿ ಎಂಬ ಹಮ್ಮುಬಿಮ್ಮು ತೋರದೆ ಭಾಷಣಕಾರ್ತಿಗೆ ನೀರು ಕೊಟ್ಟಿದ್ದರ ಬಗ್ಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ತೈಲ ಬೆಲೆ ನಿಯಂತ್ರಣ ಸರ್ಕಾರಕ್ಕೆ ಸವಾಲು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್