ಅಮೃತಸರ (ಪಂಜಾಬ್) :ಪಂಜಾಬ್ ವಿಧಾನಸಭೆ ಚುನಾವಣೆಯು ರಂಗೇರಿದೆ. ಈ ಬಾರಿಯ ರಾಜಕಿಯ ಲೆಕ್ಕಾಚಾರ ಬೇರೆಯೇ ಆಗಿದೆ. ರಾಜಕೀಯ ಧ್ರುವೀಕರಣವು ಪಂಜಾಬ್ನಲ್ಲಿ ಈ ಬಾರಿ ತುರುಸಿನ ಪೈಪೋಟಿಗೆ ಕಾರಣವಾಗಲಿದೆ ಎನ್ನಲಾಗಿದೆ. ಹಿಂದು-ಮುಸ್ಲಿಂ ಮತಗಳ ಜೊತೆಗೆ ಸಿಖ್, ದಲಿತ, ದಲಿತೇತರ ಮತ್ತು ಒಬಿಸಿ ಮತಗಳ ಧ್ರುವೀಕರಣವಾಗುವ ಸಾಧ್ಯತೆ ಗೋಚರವಾಗುತ್ತಿದೆ.
ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹೊರ ಬಂದಿದ್ದು, ಕಾಂಗ್ರೆಸ್ಗೆ ಹಿನ್ನಡೆ ಉಂಟು ಮಾಡಲಿದೆ ಎನ್ನಲಾಗಿತ್ತು. ಇದಕ್ಕೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಈಗಾಗಲೇ ದಲಿತ ಸಮುದಾಯದ ಚರಣಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿ, ಜಾಟ್ ಸಿಖ್ಖರಾದ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದೆ. ಇದು ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನವೇ ಜಾತಿ ಸಮೀಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ.
ಕಾಂಗ್ರೆಸ್ ಜೊತೆಗೆ ಶಿರೋಮಣಿ ಅಕಾಲಿಕದಳವೂ ಇದೇ ಹಾದಿ ತುಳಿದಿದೆ. ಚುನಾವಣೆ ಪೂರ್ವದಲ್ಲಿಯೇ ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸಿಖ್ ಮುಖ್ಯಮಂತ್ರಿ, ಹಿಂದು ಅಥವಾ ಪರಿಶಿಷ್ಟ ಜಾತಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಘೋಷಿಸಿದೆ. ಈ ಮಧ್ಯೆ ಬಿಜೆಪಿ ವಲಯದಲ್ಲೂ ಕೂಡ ಅಧಿಕಾರ ಸಿಕ್ಕಲ್ಲಿ ಪರಿಶಿಷ್ಟ ಜಾತಿಯ ಸಿಎಂ ಮಾಡುವ ಬಗ್ಗೆ ಗುಸುಗುಸು ಶುರುವಾಗಿದೆ.
ಹಿಂದು- ಮುಸ್ಲಿಂ ಮತಗಳ ಧ್ರುವೀಕರಣ :ಈ ಹಿಂದೆ ಪಂಜಾಬ್ನಲ್ಲಿ ಅತ್ಯಾಚಾರ, ಗುಂಪು ದಾಳಿಯಿಂದ ಅಕಾಲಿ ಶಿರೋಮಣಿ ಪಕ್ಷ ಅಧಿಕಾರ ಕಳೆದುಕೊಂಡಿತ್ತು. ಈಗಿರುವ ಕಾಂಗ್ರೆಸ್ ಸರ್ಕಾರವೂ ಕೂಡ ಇದರಿಂದ ಹೊರತಾಗಿಲ್ಲ. ಕೆಲ ದಿನಗಳ ಹಿಂದೆ ಅಮೃತಸರದ ಗೋಲ್ಡನ್ ಟೆಂಪಲ್, ಪಟಿಯಾಲಾದ ದೇವಿ ಟೆಂಪಲ್ನಲ್ಲಿ ವ್ಯಕ್ತಿಯೊಬ್ಬನನ್ನು ಬಡಿದು ಕೊಂದ ಪ್ರಕರಣ, ಮಾಜಿ ಡಿಜಿಪಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಧು ಅವರ ಸಲಹೆಗಾರ ಮೊಹಮ್ಮದ್ ಮುಸ್ತಫಾ ಹಿಂದುಗಳ ವಿರುದ್ಧ ನೀಡಿರುವ ಹೇಳಿಕೆ ಧಾರ್ಮಿಕ ಭಾವನೆಯನ್ನು ಕೆರಳಿಸಿದೆ. ಇದು ಸರ್ಕಾರದ ವರ್ಚಸ್ಸಿಗೆ ಧಕ್ಕೆ ತಂದಿದೆ. ಅಲ್ಲದೇ, ಸಿಖ್ ಮತ್ತು ಹಿಂದುಗಳ ನಡುವೆ ಕಂದಕ ಸೃಷ್ಟಿ ಮಾಡಿದೆ. ಈ ಜಾತಿ ಧ್ರುವೀಕರಣವು ಚುನಾವಣೆಯ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆ.