ಕೋಲ್ಕತ್ತಾ (ಪಶ್ಚಿಮ ಬಂಗಾಳ): ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಅಲ್ಲಿಂದ ಸುರಕ್ಷಿತವಾಗಿ ಭೂಮಿಗೆ ತರುವ ಗಗನಯಾನ ಯೋಜನೆಯೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಂದಿರುವ ಮುಖ್ಯ ಗುರಿ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದರು. ಕೋಲ್ಕತ್ತಾದಲ್ಲಿ ಬುಧವಾರ ರಾಜಭವನದಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ನಂಬಿಕೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಭವನದಲ್ಲಿ ಬುಧವಾರ ಆರಂಭವಾದ ಗ್ಲೋಬಲ್ ಎನರ್ಜಿ ಸಂಸತ್ತಿನ (Global Energy Parliament - GEP) 13ನೇ ಅಧಿವೇಶನದಲ್ಲಿ ಭಾಗವಹಿಸಿದ ಇಸ್ರೋ ಅಧ್ಯಕ್ಷರು, ಚಂದ್ರಯಾನ 3ರ ಯಶಸ್ಸು ಮತ್ತು ಮುಂದಿನ ಯೋಜನೆ ಕುರಿತು ಮಾತನಾಡಿದರು. ಇಸ್ರೋ ಮುಂದೆ ಭವಿಷ್ಯದಲ್ಲಿ ಹಲವು ಪ್ರಮುಖ ಗುರಿಗಳಿವೆ. ಇದರಲ್ಲಿ ಮೊದಲನೆಯದು ಗಗನಯಾನ ಯೋಜನೆ. ಮನುಷ್ಯನನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಸುರಕ್ಷಿತವಾಗಿ ಭೂಮಿಗೆ ಕರೆತರುವುದು ನಮ್ಮ ಗುರಿಯಾಗಿದೆ ಎಂದು ಸೋಮನಾಥ್ ಹೇಳಿದರು. ಕಳೆದ ಅಕ್ಟೋಬರ್ನಲ್ಲಿ ಇಸ್ರೋ ತನ್ನ ಬಹುನಿರೀಕ್ಷಿತ ಗಗನಯಾನ ಮಿಷನ್ನ ಪರೀಕ್ಷಾರ್ಥ ಉಡಾವಣೆಯನ್ನು ಯಶಸ್ವಿಯಾಗಿ ಮಾಡಿದೆ.
ಇದೇ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗಳನ್ನು ಸಾಧಿಸುವುದಕ್ಕಾಗಿ ಇಸ್ರೋ ಮುಖ್ಯಸ್ಥ ಸೋಮನಾಥ್ ಅವರಿಗೆ ರಾಜ್ಯಪಾಲರ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಪ್ರಶಸ್ತಿ ನೀಡಿ ಗೌರವಿಸಿದರು. ಈ ಗೌರವ ಸಂದಿರುವುದಕ್ಕಾಗಿ ಅವರು ತಮ್ಮ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು. ಇದು ಒಟ್ಟಿಗೆ ಕೆಲಸ ಮಾಡಲು ಶಕ್ತಿ ನೀಡುತ್ತದೆ ಎಂದರು.