ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪೌರಸಂಸ್ಥೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ ಆರೋಪದಲ್ಲಿ ಈಗಾಗಲೇ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಇಂದು ಬಿಜೆಪಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆ ಮೇಲೆ ದಾಳಿ ಮಾಡಿದರು. ಬೆಳಿಗ್ಗೆ ತನಿಖಾಧಿಕಾರಿಗಳು ಐದು ಕಡೆಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ರಣಘಾಟ್ ವಾಯುವ್ಯ ಕ್ಷೇತ್ರದ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದರು.
ಇನ್ನೊಂದು ಅಧಿಕಾರಿಗಳ ತಂಡ ಹೌರಾ ಜಿಲ್ಲೆಯ ಉಲುಬೇರಿಯಾ ಗ್ರಾಮಾಂತರ ಪ್ರದೇಶದಲ್ಲಿ ದಾಳಿ ನಡೆಸಿತು. ಈ ಸಂದರ್ಭದಲ್ಲಿ ತನಿಖಾಧಿಕಾರಿಗಳು ಡೈಮಂಡ್ ಹಾರ್ಬರ್ ಮುನ್ಸಿಪಾಲಿಟಿಯ ಮಾಜಿ ಮೇಯರ್ ಮೀರಾ ಹಲ್ದಾರ್ ಮನೆ ಮೇಲೂ ದಾಳಿ ನಡೆಸಿ ಶೋಧ ಕೈಗೊಂಡರು. ಉಲುಬೇರಿಯಾ ಮುನ್ಸಿಪಾಲಿಟಿಯ ಮಾಜಿ ಅಧ್ಯಕ್ಷ ಅರ್ಜುನ್ ಸರ್ಕಾರ್ ಮನೆಗೂ ಸಿಬಿಐ ದಾಳಿ ಮಾಡಿತು.
ಸಿಬಿಐ ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಳಗ್ಗೆ ಭದ್ರತಾ ಸಿಬ್ಬಂದಿಗಳೊಂದಿಗೆ ಸಿಬಿಐ, ಬಿಜೆಪಿ ಶಾಸಕ ಪಾರ್ಥ ಸಾರಥಿ ಚಟರ್ಜಿ ಮನೆಗೆ ತೆರಳಿದೆ. ಭದ್ರತಾ ಸಿಬ್ಬಂದಿ ಶಾಸಕರ ಮನೆಯನ್ನು ಸುತ್ತುವರೆದಿದ್ದರು. ದಾಳಿಗೂ ಮುನ್ನ ಭದ್ರತಾ ಸಿಬ್ಬಂದಿ ಜೊತೆ ಸಿಬಿಐ ಅಧಿಕಾರಿಗಳು ಮಾತುಕತೆ ನಡೆಸಿದ್ದರು.