ಹೈದರಾಬಾದ್:ವಿವಿಧ ಸಮುದಾಯಗಳು, ಜಾತಿ - ಧರ್ಮಗಳ ಜನರಿಗೆ ವಧು-ವರರನ್ನು ಹುಡುಕಿಕೊಡಲು ಮ್ಯಾರೇಜ್ ಬ್ಯೂರೋಗಳು ಇರುತ್ತವೆ. ಆದರೆ ಇಲ್ಲಿ ವಿಶೇಷವಾಗಿ ರೈತರಿಗೆ ವಧು ಹುಡುಕಲು ಕಚೇರಿಯೊಂದನ್ನು ಸ್ಥಾಪನೆ ಮಾಡಲಾಗಿದೆ.
ಕೇತಿರೆಡ್ಡಿ ಅಂಜಿ ರೆಡ್ಡಿ ಎಂಬ ಕೃಷಿಕ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ 'ರೈತ ಮ್ಯಾರೇಜ್ ಬ್ಯೂರೋ' ಸ್ಥಾಪಿಸಿದ್ದಾರೆ. ಇದು ರೈತರಿಗಾಗಿ ಸ್ಥಾಪನೆಯಾದ ಭಾರತದ ಮೊದಲ ವಧು -ವರರ ಅನ್ವೇಷಣಾ ಕೇಂದ್ರವಾಗಿದೆ.
ಕೃಷಿಯನ್ನು ಲಾಭದಾಯಕ ವೃತ್ತಿಯಾಗಿ ಕಾಣದಿರುವ, ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ, ಮತ್ತು ರೈತರನ್ನು 'ಅಳಿಯ'ನನ್ನಾಗಿ ಒಪ್ಪಿಕೊಳ್ಳಲು ಹಿಂಜರಿಯುವ ಈ ಸಮಯದಲ್ಲಿ ಕೇತಿರೆಡ್ಡಿ ಕೃಷಿ ಸಮುದಾಯಕ್ಕೆ ಈ ಮೂಲಕ ವಿಶಿಷ್ಟ ಸೇವೆಯನ್ನು ನೀಡಲು ಮುಂದಾಗಿದ್ದಾರೆ.
ರೈತರು ಕೃಷಿಯ ಪ್ರತಿಯೊಂದು ಹಂತದಲ್ಲೂ ಕಷ್ಟಪಡುವುದು ಮಾತ್ರವಲ್ಲದೇ 'ಮದುವೆ' ವಿಚಾರ ಬಂದಾಗ ತಾರತಮ್ಯಕ್ಕೂ ಒಳಗಾಗುತ್ತಾರೆ. ಈಗ ಕಾಲ ಬದಲಾಗಿದೆ. ಕಳೆದೊಂದು ದಶಕದಿಂದ ಮಾಹಿತಿ ತಂತ್ರಜ್ಞಾನ ಸೇರಿದಂತೆ ಇತರ ಕ್ಷೇತ್ರಗಳಲ್ಲಿನ ನಾನಾ ಉದ್ಯೋಗಾವಕಾಶಗಳಿಂದಾಗಿ ಹೆಣ್ಣನ್ನು ಹೆತ್ತ ಪೋಷಕರು ತಮ್ಮ ಮಗಳನ್ನು ಒಬ್ಬ ರೈತನಿಗೆ ಕೊಡಲು ಮುಂದೆ ಬರುವುದಿಲ್ಲ. ಅನೇಕ ಕೃಷಿ ಕುಟುಂಬಗಳೇ ತಮ್ಮ ಮಗಳನ್ನು ಸಾಫ್ಟ್‌ವೇರ್ ಉದ್ಯೋಗಿಗಳಿಗೆ, ಸರ್ಕಾರಿ ನೌಕರಿಯಲ್ಲಿರುವವಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಮೂರು ಎಕರೆ ಜಮೀನು ಹೊಂದಿರುವ ಕುಟುಂಬವೊಂದು 10 ಎಕರೆ ಜಮೀನು ಹೊಂದಿರುವ ರೈತನಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ನಿರಾಕರಿಸಿದ ಘಟನೆ ತಿಳಿದು ಬೇಸರವೆನಿಸಿತು. ಅನೇಕ ರೈತರು 40 ವರ್ಷ ದಾಟಿದ್ದರೂ ವಿವಾಹವಾಗದೇ ಕುಳಿತಿದ್ದಾರೆ ಎಂದು ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪರಿಹಾರ ಕಂಡುಕೊಳ್ಳುಬ ನಿಟ್ಟಿನಲ್ಲಿ 15 ದಿನಗಳ ಹಿಂದೆ ಕೆತಿರೆಡ್ಡಿ 'ರೈತ ಮ್ಯಾರೇಜ್ ಬ್ಯೂರೋ' ಸ್ಥಾಪಿಸಿದ್ದಾರೆ. ಕೇವಲ 15 ದಿನಗಳಲ್ಲಿ ತೆಲುಗು ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಿಂದ ಸುಮಾರು 3,000 ಜನರು ನಮ್ಮನ್ನು ಸಂಪರ್ಕಿಸಿದ್ದಾರೆ. ಸುಮಾರು 1,000 ಜನರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ 500 ರೂ.ಇದೆ. ಯಾರಿಗಾದರೂ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದರೆ ಅವರಿಗೆ ಉಚಿತ ಸೇವೆ ನೀಡುತ್ತೇವೆ ಎಂದು ಕೇತಿರೆಡ್ಡಿ ತಿಳಿಸಿದ್ದಾರೆ.