ನವ ದೆಹಲಿ: ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧಾರಿತ ಹಣದುಬ್ಬರವು 21 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ನವೆಂಬರ್‌ನಲ್ಲಿ ಶೇ.5.85ಕ್ಕೆ ಇಳಿದಿದೆ. ಮೇ ತಿಂಗಳಿನಿಂದ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಅಕ್ಟೋಬರ್‌ನಲ್ಲಿ ಒಂದಂಕಿ ಎಂದರೆ ಶೇ.8.39ಕ್ಕೆ ಇಳಿಕೆಯಾಗಿತ್ತು.
ಆಹಾರ, ಇಂಧನ ಮತ್ತು ತಯಾರಿಕಾ ವಸ್ತುಗಳ ಬೆಲೆ ಕಡಿಮೆಯಾದ ಕಾರಣ ಸಗಟು ಹಣದುಬ್ಬರ ಇಳಿಕೆಯಾಗಿದೆ. ಕಳೆದ 2021ರ ಫೆಬ್ರವರಿಯಲ್ಲಿ ಶೇ.4.83ರಷ್ಟು ಅಂದರೆ, ಅತ್ಯಂತ ಕನಿಷ್ಟ ಮಟ್ಟದ ಹಣದುಬ್ಬರ ದಾಖಲಾಗಿತ್ತು.
ನವೆಂಬರ್‌ನಲ್ಲಿ ಹಣದುಬ್ಬರ ಕುಸಿತಕ್ಕೆ ಆಹಾರ ಪದಾರ್ಥಗಳು, ಲೋಹಗಳು, ಜವಳಿ, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಕಾಗದ ಮತ್ತು ಕಾಗದದ ಉತ್ಪನ್ನಗಳ ಬೆಲೆಗಳ ಕುಸಿತ ಕಾರಣವಾಗಿದೆ. ಹಣದುಬ್ಬರವನ್ನು ಮತ್ತಷ್ಟು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತದೆ ಎಂದು ಲೋಕಸಭೆಯಲ್ಲಿಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.