ನವದೆಹಲಿ:ರಾಜ್ಯಸಭಾ ಸದಸ್ಯರ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಕೃತ್ಯ ಪ್ರಜಾಪ್ರಭುತ್ವದ ಕೊಲೆಗಿಂತ ಕಡಿಮೆಯೇನಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ನಾಯಕರ ಜೊತೆ ಕರೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ಕಿಡಿಕಾರಿದ ಅವರು, ಜನರಲ್ ಇನ್ಶೂರೆನ್ಸ್ ಮಸೂದೆಯನ್ನು ಗದ್ದಲದಲ್ಲೇ ರಾಜ್ಯಸಭೆಯಲ್ಲಿ ಅಂಗೀಕರಿಸಿದ್ದಕ್ಕೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿವಾದಾತ್ಮಕ ಜನರಲ್ ಇನ್ಶೂರೆನ್ಸ್ (ರಾಷ್ಟ್ರೀಕರಣ) ಬಿಲ್-2021 ಅನ್ನು ಈ ಗದ್ದಲದಲ್ಲೇ ಅಂಗೀಕರಿಸಲಾಗಿದೆ. ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ವಿಪಕ್ಷಗಳ ನಾಯಕರು ಒತ್ತಾಯಿಸಿದರೂ ಕೂಡಾ ಆಡಳಿತ ಪಕ್ಷ ನಿರಾಕರಿಸಿದೆ ಎಂದಿದ್ದಾರೆ.
ರಾಜ್ಯಸಭಾ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಚೇಂಬರ್ನಲ್ಲಿ ಈ ಕುರಿತು ಸರ್ವಪಕ್ಷ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ರಾಹುಲ್ ಗಾಂಧಿ, ಎನ್ಸಿಪಿ ನಾಯಕ ಶರದ್ ಪವಾರ್, ಶಿವಸೇನೆಯ ಸಂಜಯ್ ರಾವತ್, ಆರ್ಜೆಡಿಯ ಮನೋಜ್ ಝಾ, ಡಿಎಂಕೆಯ ತಿರುಚ್ಚಿ ಶಿವ ಮತ್ತು ಇತರ ಪಕ್ಷಗಳ ನಾಯಕರು ಭಾಗವಹಿಸಿದ್ದರು.
ನಂತರ ಪಾರ್ಲಿಮೆಂಟ್ನಿಂದ ವಿಜಯ್ ಚೌಕ್ಗೆ ತೆರಳಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಯಲ್ಲಿ ಪ್ಲಕಾರ್ಡ್ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು. ಪ್ರಜಾಪ್ರಭುತ್ವದ ಹತ್ಯೆ ನಿಲ್ಲಿಸಿ (Stop murder of democracy) ಮತ್ತು ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಲು ನಾವು ಒತ್ತಾಯಿಸುತ್ತೇವೆ (we demand Repeal of anti farmers laws) ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಗಿದೆ.
ಸಂಸತ್ತಿನ ಅಧಿವೇಶನ ಮುಗಿದಿದೆ. ದೇಶದ ಶೇಕಡಾ 60ರಷ್ಟು ಜನರಿಗೆ ಸಂಸತ್ತಿನ ಅಧಿವೇಶನ ಇರಲಿಲ್ಲ. ಏಕೆಂದರೆ ಶೇಕಡಾ 60ರಷ್ಟು ಜನರ ಧ್ವನಿಯನ್ನು ಅಧಿವೇಶನದಲ್ಲಿ ಹತ್ತಿಕ್ಕಲಾಗಿದೆ, ಅವಮಾನಿಸಲಾಗಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮಾತನಾಡಿದ ಶಿವಸೇನಾ ಮುಖ್ಯಸ್ಥ ಸಂಜಯ್ ರಾವತ್, ನಾನು ರಾಜ್ಯಸಭೆಯಲ್ಲಿ ನಿಂತರೆ, ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಗುತ್ತಿದೆ ಎಂದಿದ್ದು, ಎನ್ಸಿಪಿಯ ಶರದ್ ಪವಾರ್ ಅವರು 55 ವರ್ಷಗಳ ವೃತ್ತಿಜೀವನದಲ್ಲಿ ಇಂಥಹ ಘಟನೆ ಸಂಭವಿಸಿರಲಿಲ್ಲ ಎಂದಿದ್ದಾರೆ.
ಬಾವಿಗಿಳಿದು ಪ್ರತಿಭಟನೆ ನಡೆಸಲು ಯತ್ನಿಸಿದಾಗ ಮಾರ್ಷಲ್ಗಳು ಮತ್ತು ಮಹಿಳೆಯರು ಅಡ್ಡಿಪಡಿಸಿದ್ದಾರೆ. ಮಹಿಳಾ ಸಂಸದರ ಮೇಲೆ ಪುರುಷ ಮಾರ್ಷಲ್ಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಅಂಗಾಂಗ ದಾನಕ್ಕೆ ಸಹಿ ಹಾಕುವೆ, ಜೀವಗಳ ಉಳಿಸುವ ಕಾರ್ಯಕ್ಕೆ ಮುಂದಾಗೋಣ: ಸಿಎಂ ಬೊಮ್ಮಾಯಿ