ನವದೆಹಲಿ: ಇತ್ತೀಚೆಗೆ ನೂತನವಾಗಿ ರಚನೆಗೊಂಡ ಪ್ರತಿಪಕ್ಷ 'ಇಂಡಿಯಾ' ಮೈತ್ರಿಕೂಟ ಗುರಿಯಾಗಿಸಿಕೊಂಡಿರುವ ಬಿಜೆಪಿಯನ್ನು ಕಾಂಗ್ರೆಸ್ ಪಕ್ಷ ಶನಿವಾರ ತರಾಟೆಗೆ ತೆಗೆದುಕೊಂಡಿದೆ. 'ಇಂಡಿಯಾ' ಕೂಟ ಯಾವುದೇ ಕಾನೂನು ಅಂಶಗಳನ್ನು ಮೀರಿಲ್ಲ ಎಂದು ಹೇಳಿದೆ.
''ಬಿಜೆಪಿ ನೂತನ ಪ್ರತಿಪಕ್ಷ 'ಇಂಡಿಯಾ' ಒಕ್ಕೂಟವನ್ನು ಗುರಿಯಾಗಿಸಿಕೊಂಡು ಕೆಳಮಟ್ಟದ ಪ್ರಚಾರದಲ್ಲಿ ತೊಡಗಿದೆ. ಪ್ರತಿಪಕ್ಷಗಳ ಒಗ್ಗಟ್ಟಿನಿಂದ ಜರ್ಜರಿತಗೊಂಡಿದೆ. ಅವರ ರಾಜಕೀಯ ಒತ್ತಡವನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಆದರೆ, 'ಇಂಡಿಯಾ' ಅನ್ನೋದು ಕಾನೂನು ಬಾಹಿರ ಒಕ್ಕೂಟ ಎಂಬ ಹೇಳಿಕೆ ನೀಡುತ್ತಿರುವ ಬಿಜೆಪಿಗರಿಗೆ ಕಾನೂನಿನ ಅರಿವೇ ಇಲ್ಲ. ನಮ್ಮ ಪ್ರತಿಕ್ಷದ ಮೈತ್ರಿಕೂಟ ಯಾವುದೇ ಕಾನೂನು ಬಾಹಿರತೆಗೆ ಒಳಪಟ್ಟಿಲ್ಲ. ಇದೊಂದು ವಿಸ್ತೃತ ಹೆಸರಿನ ಸಂಕ್ಷಿಪ್ತ ರೂಪವಾಗಿದೆ, ಆದರೆ, ಪದವಲ್ಲ. ಅಲ್ಲದೆ, ಇದು 1950ರ ಕಾಯ್ದೆಗೆ ಒಳಪಟ್ಟಿದ್ದು ಯಾವುದೇ ರೀತಿಯ ಲಾಂಛನ ಹಾಗೂ ಹೆಸರುಗಳನ್ನು ಹೊಂದಿಲ್ಲ.'' ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಸುಪ್ರೀಂ ಕೋರ್ಟ್ ವಕೀಲ ವಿವೇಕ್ ಟಂಖಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯ ಕಾರ್ಯತಂತ್ರಕ್ಕಾಗಿ ಜುಲೈ 18 ರಂದು ಬೆಂಗಳೂರಿನಲ್ಲಿ ಸಭೆ ಸೇರಿದ್ದ 26 ಪಕ್ಷಗಳು ಪ್ರತಿಪಕ್ಷಗಳ ಮೈತ್ರಿಕೂಟವನ್ನು 'ಇಂಡಿಯಾ' ಎಂದು ನಾಮಕರಣ ಮಾಡಿವೆ. ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್‌ನ ಸಂಕ್ಷಿಪ್ತ ರೂಪವೇ ಇಂಡಿಯಾ. ಆದರೆ, ಇದನ್ನು ಪ್ರಶ್ನಿಸಿ ಅದೇ ದಿನ, ಬಾಂಬೆ ಹೈಕೋರ್ಟ್ ವಕೀಲ ಹಾಗೂ ಬಿಜೆಪಿ ಮಹಾರಾಷ್ಟ್ರ ಸಾಮಾಜಿಕ ಮಾಧ್ಯಮ ಕಾನೂನು ಮತ್ತು ಸಲಹಾ ವಿಭಾಗದ ಮುಖ್ಯಸ್ಥ ಅಶುತೋಷ್ ಜೆ ದುಬೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮೈತ್ರಿ ಹೆಸರಿಗೆ ತನ್ನ ಆಕ್ಷೇಪಣೆಯನ್ನು ದಾಖಲಿಸಿದ್ದರು.
“ರಾಷ್ಟ್ರದ ಘನತೆಗೆ ಅಗೌರವ ತೋರುವ ನಿಟ್ಟಿನಲ್ಲಿ ಹಾಗೂ ರಾಜಕೀಯ ಲಾಭಕ್ಕಾಗಿ ಇಂಡಿಯಾ ಹೆಸರನ್ನು ಬಳಸುವ ಬಗ್ಗೆ ನಾನು ಭಾರತದ ಚುನಾವಣಾ ಆಯೋಗಕ್ಕೆ ಆಕ್ಷೇಪಣೆಯನ್ನು ದಾಖಲಿಸಿದ್ದೇನೆ. ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ಪೋಷಿಸುವ ಭಾರತದ ಚುನಾವಣಾ ಆಯೋಗದ ಬದ್ಧತೆಯನ್ನು ನಾನು ನಂಬುತ್ತೇನೆ. ಈ ವಿಷಯದಲ್ಲಿ ನಿಮ್ಮ ಮಧ್ಯಸ್ಥಿಕೆಯು ನಮ್ಮ ರಾಷ್ಟ್ರದ ಘನತೆಯನ್ನು ಕಾಪಾಡಿಕೊಳ್ಳಲು ಮತ್ತು ನಮ್ಮ ದೇಶ ನಿಂತಿರುವ ಪ್ರಜಾಸತ್ತಾತ್ಮಕ ತತ್ವಗಳನ್ನು ಕಾಪಾಡಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ದುಬೆ ಟ್ವೀಟ್ ಸಹ ಮಾಡಿದ್ದಾರೆ.