ನವದೆಹಲಿ: ಮೇ 10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಿನ್ನೆ(ಶನಿವಾರ) ಹೊರಬಿದ್ದಿದೆ. ಕಾಂಗ್ರೆಸ್ ಪಕ್ಷ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ 2.6 ಲಕ್ಷಕ್ಕೂ ಹೆಚ್ಚು ಮತದಾರರು 'ಮೇಲಿನ ಯಾವುದೂ ಅಲ್ಲ' ಅಥವಾ NOTA ಆಯ್ಕೆ ಬಳಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಲಭ್ಯವಿದ್ದ ಅಂಕಿಅಂಶಗಳ ಪ್ರಕಾರ, "ಬುಧವಾರದಂದು ಮತ ಚಲಾಯಿಸಲು ಆಗಮಿಸಿದ್ದ ಸುಮಾರು 3.84 ಕೋಟಿ ಜನರಲ್ಲಿ 2,59,278 (ಶೇ. 0.7) ಮಂದಿ ನೋಟಾ ಆಯ್ಕೆಗೆ ಮತ ಹಾಕಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ 3,22,841 ಜನ ನೋಟಾ ಮತ ಹಾಕಿದ್ದರು. ಅಂದರೆ ಒಟ್ಟು ಮತದಾನದ 0.9% ನೋಟಾ ಚಲಾವಣೆ ಆಗಿತ್ತು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ನೋಟಾ ಮತಗಳಲ್ಲಿ ಕುಸಿತವಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಚಲಾವಣೆಯಾಗಿತ್ತು. ಸುಮಾರು 2.57 ಲಕ್ಷ ಮತದಾರರು ನೋಟಾ ಚಲಾಯಿಸಿ ಕಣದಲ್ಲಿರುವ ಅಭ್ಯರ್ಥಿಗಳನ್ನು ತಿರಸ್ಕರಿಸಿದ್ದರು.
ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ನೋಟಾ ಆಯ್ಕೆಯನ್ನು 2013 ರಲ್ಲಿ ಪರಿಚಯಿಸಲಾಯಿತು. ಇದು ಬ್ಯಾಲೆಟ್ ಪೇಪರ್ನೊಂದಿಗೆ ಕಪ್ಪು ಶಿಲುಬೆಯನ್ನು ಹೊಂದಿರುವ ತನ್ನದೇ ಆದ ಚಿಹ್ನೆಯನ್ನು ಹೊಂದಿದೆ. ಸೆಪ್ಟೆಂಬರ್ 2013 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗವು ಇವಿಎಂಗಳಲ್ಲಿ ನೋಟಾ ಬಟನ್ ಅನ್ನು ಮತದಾನ ಫಲಕದಲ್ಲಿ ಕೊನೆಯ ಆಯ್ಕೆಯಾಗಿ ಸೇರಿಸಿದೆ. ಈ ನೋಟಾ ಚಿಹ್ನೆಯನ್ನು ಚುನಾವಣಾ ಸಮಿತಿಗಾಗಿ ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ವಿನ್ಯಾಸಗೊಳಿಸಿದೆ.