ಕರ್ನಾಟಕ

karnataka

ETV Bharat / bharat

Maharashtra politics: ಇಂದಿನ ಬೆಳವಣಿಗೆ ಶ್ರೇಯಸ್ಸು ಪ್ರಧಾನಿ ಮೋದಿಗೆ ನೀಡುತ್ತೇನೆ.. ಅವರಿಗೆ ನಾನು ಕೃತಜ್ಞ ಎಂದ ಶರದ್ ಪವಾರ್ - ಪ್ರಧಾನಿ ಮೋದಿ

ಪ್ರಧಾನಿ ಮೋದಿ ಬೆರಳು ತೋರಿದ್ದ ನಾಯಕರೇ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರರ್ಥ ಮೋದಿಯವರ ಆರೋಪಗಳು ನಿರಾಧಾರ. ನಾವು ಈಗ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದೇವೆ. ಹೀಗಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

Not worried about what has happened; charges against Ajit proven false: Sharad Pawar
ಇಂದಿನ ಬೆಳವಣಿಗೆ ಶ್ರೇಯಸ್ಸು ಪ್ರಧಾನಿ ಮೋದಿಗೆ ನೀಡುತ್ತೇನೆ... ಅವರಿಗೆ ನಾನು ಕೃತಜ್ಞ ಎಂದ ಶರದ್ ಪವಾರ್

By

Published : Jul 2, 2023, 6:47 PM IST

ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಇಂದು ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಪ್ರತಿಕ್ರಿಯಿಸಿದ್ದು, ಭಾನುವಾರ ಏನಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ. ಎರಡ್ಮೂರು ದಿನಗಳಲ್ಲಿ ಜನರೇ ವಾಸ್ತವವನ್ನು ನೋಡುತ್ತಾರೆ ಎಂದು ಹೇಳಿದ್ದಾರೆ. ಇದೇ ವೇಳೆ, ಅಜಿತ್ ಪವಾರ್ ತೊರೆದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಜಿತೇಂದ್ರ ಅವದ್ ಅವರ ಹೆಸರನ್ನು ಪವಾರ್​ ಘೋಷಿಸಿದ್ದಾರೆ.

ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಅಜಿತ್ ಪವಾರ್ ಸೇರ್ಪಡೆಯಾದ ಬಗ್ಗೆ ಪುಣೆಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಶರದ್ ಪವಾರ್, ನನ್ನ ಮನೆ ಒಡೆದಿದೆ ಎಂದು ನಾನು ಎಂದಿಗೂ ಹೇಳುವುದಿಲ್ಲ. ಇದು ನನ್ನ ಮನೆಗೆ ಸಂಬಂಧಿಸಿದ ವಿಷಯವಲ್ಲ. ಇದು ಜನರ ಸಮಸ್ಯೆ, ಬಿಟ್ಟುಹೋದವರ ಭವಿಷ್ಯದ ಬಗ್ಗೆ ನನಗೆ ಚಿಂತೆಯಾಗಿದೆ ಎಂದು ಕುಟುಕಿದರು.

ಇದನ್ನೂ ಓದಿ:Maharashtra politics: ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ: ಡಿಸಿಎಂ ಆಗಿ ಅಜಿತ್ ಪವಾರ್ ಅಧಿಕಾರ ಸ್ವೀಕಾರ

ಮುಂದುವರೆದು, ಇಂದಿನ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಯ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲು ಬಯಸುತ್ತೇನೆ. ಎರಡು ದಿನಗಳ ಹಿಂದೆ ಅವರು (ಮೋದಿ) ಹೇಳಿಕೆಗಳನ್ನು ನೀಡಿದ್ದರು. ಆ ಹೇಳಿಕೆಯ ನಂತರ ಕೆಲವು ಜನರ ನೆಮ್ಮದಿ ಕೆಡಿಸಿದೆ. ಅವರಲ್ಲಿ ಕೆಲವರು ಜಾರಿ ನಿರ್ದೇಶನಾಲಯದ ಕ್ರಮಗಳನ್ನು ಎದುರಿಸುತ್ತಿದ್ದಾರೆ ಎಂದು ಹಿರಿಯ ರಾಜಕಾರಣಿ ಟೀಕಿಸಿದರು.

ಅಲ್ಲದೇ, ಎರಡು ದಿನಗಳ ಹಿಂದೆ ಎನ್‌ಸಿಪಿ ಬಗ್ಗೆ ಪ್ರಧಾನಿ ಮಾತನಾಡಿದ್ದರು. ಇದರಲ್ಲಿ ಎರಡು ವಿಷಯಗಳನ್ನು ಮೋದಿ ಹೇಳಿದ್ದರು. ಒಂದು ಎನ್‌ಸಿಪಿ ಪಕ್ಷ ಅಂತ್ಯವಾಗಿದೆ ಹಾಗೂ ಎರಡನೆಯದು ನೀರಾವರಿ ದೂರು ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಪ್ರಸ್ತಾಪಿಸಿದ್ದರು. ಈಗ ನನ್ನ ಕೆಲವು ಸಹೋದ್ಯೋಗಿಗಳು ಪ್ರಮಾಣವಚನ ಸ್ವೀಕರಿಸಿರುವುದು ಸಂತಸ ತಂದಿದೆ. ಇದರಿಂದ ಮೋದಿಯವರ ಆರೋಪಗಳು ನಿರಾಧಾರವಾಗಿವೆ. ನಾವು ಈಗ ಎಲ್ಲ ಆರೋಪಗಳಿಂದ ಮುಕ್ತರಾಗಿದ್ದೇವೆ. ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದೂ ವ್ಯಂಗ್ಯವಾಡಿದರು.

ಇದನ್ನೂ ಓದಿ:Maharashtra Politics: 4 ವರ್ಷದಲ್ಲಿ 4 ಪ್ರಮಾಣವಚನ ಸಮಾರಂಭ ಕಂಡ ಮಹಾರಾಷ್ಟ್ರ: ಒಂದೇ ವರ್ಷದಲ್ಲಿ ಶಿವಸೇನೆ, ಎನ್​ಸಿಪಿ ಇಬ್ಭಾಗ!

ನನ್ನ ಕೆಲವು ಸಹೋದ್ಯೋಗಿಗಳು ಭಿನ್ನ ನಿಲುವು ತಳೆದಿದ್ದು, ಜುಲೈ 6ರಂದು ಎಲ್ಲ ಮುಖಂಡರ ಸಭೆ ಕರೆದಿದ್ದೆ. ಅಲ್ಲಿ ಕೆಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗಬೇಕಿತ್ತು. ಪಕ್ಷದೊಳಗೆ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು. ಆದರೆ ಆ ಸಭೆಗೂ ಮುನ್ನವೇ ಕೆಲವು ನಾಯಕರು ವಿಭಿನ್ನ ನಿಲುವನ್ನು ತೆಗೆದುಕೊಂಡಿದ್ದಾರೆ. ನಾನು ಮಹಾರಾಷ್ಟ್ರದ ಜನರನ್ನು ನಂಬುತ್ತೇನೆ. ಎರಡ್ಮೂರು ದಿನಗಳಲ್ಲಿ ವಾಸ್ತವ ಹೊರಬರಲಿದೆ. ಇದು ನನಗೆ ಹೊಸ ವಿಷಯವಲ್ಲ. 1980 ರಲ್ಲಿ ನಾನು ನೇತೃತ್ವ ವಹಿಸಿದ್ದ ಪಕ್ಷವು 58 ಶಾಸಕರನ್ನು ಹೊಂದಿತ್ತು, ನಂತರ ಎಲ್ಲರೂ ತೊರೆದು ಕೇವಲ 6 ಶಾಸಕರು ಉಳಿದಿದ್ದರು. ಆದರೆ, ಮತ್ತೆ ನಾನು ಪಕ್ಷದ ಸಂಖ್ಯೆಯನ್ನು ಬಲಪಡಿಸಿದೆ. ನನ್ನನ್ನು ತೊರೆದವರು ತಮ್ಮ ಕ್ಷೇತ್ರಗಳಲ್ಲಿ ಸೋತರು ಎಂದು ನೆನಪಿಸಿದರು.

ಈಗ ನಾನು ಬಹಳಷ್ಟು ಜನರಿಂದ ಹಲವಾರು ಕರೆಗಳನ್ನು ಸ್ವೀಕರಿಸುತ್ತಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತಿತರರು ನನಗೆ ಕರೆ ಮಾಡಿದ್ದಾರೆ. ನಾಳೆ ನಾನು ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಯಶವಂತರಾವ್ ಚವಾಣ್ ಅವರ ಆಶೀರ್ವಾದ ಪಡೆದು ಸಾರ್ವಜನಿಕ ಸಭೆ ನಡೆಸುತ್ತೇನೆ. ಭಾನುವಾರದ ಬೆಳವಣಿಗೆಗಳು ಪ್ರತಿಪಕ್ಷಗಳ ಒಗ್ಗಟ್ಟಿಗೆ ಅಡ್ಡಿಯಾಗುವುದಿಲ್ಲ ಎಂದು ಶರದ್ ಪವಾರ್ ತಿಳಿಸಿದರು.

ಇದನ್ನೂ ಓದಿ:Maharashtra politics: ಸರ್ಕಾರ ರಚಿಸಲು ಶಿವಸೇನೆ ಜೊತೆ ಹೋಗಬಹುದಾದರೆ ಬಿಜೆಪಿಯೊಂದಿಗೆ ಏಕೆ ಬೇಡ: ಡಿಸಿಎಂ ಪವಾರ್ ಪ್ರಶ್ನೆ

ABOUT THE AUTHOR

...view details