ಪಾಟ್ನಾ:2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೊಡ್ಡಲು ಕಾಂಗ್ರೆಸ್ ಪಕ್ಷ 'ಇಂಡಿಯಾ' ಎಂಬ ಹೆಸರಿನಲ್ಲಿ 26 ಪಕ್ಷಗಳನ್ನು ಒಗ್ಗೂಡಿಸಿ ಬೆಂಗಳೂರಿನಲ್ಲಿ ಸಭೆ ನಡೆಸಿತ್ತು. ಇಂಡಿಯಾ ಎಂಬ ಹೆಸರಿನ ಕಾಂಗ್ರೆಸ್ ಸಭೆಯನ್ನು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ವ್ಯಂಗ್ಯವಾಡಿದ್ದು, ಇದು ದೇಶವನ್ನು ಲೂಟಿ ಮಾಡಲು ಬಯಸುತ್ತಿರುವ ಈಸ್ಟ್ ಇಂಡಿಯಾ ಕಂಪನಿಯಾಗಿದೆ ಎಂದು ಹೇಳಿದ್ದಾರೆ. ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಮಾಡಿ ದೇಶವನ್ನು ಲೂಟಿ ಮಾಡಿದ ರೀತಿ, ದೇಶವನ್ನು ಲೂಟಿ ಮಾಡಲು ಭ್ರಷ್ಟರೆಲ್ಲ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಈಸ್ಟ್ ಇಂಡಿಯಾ ಕಂಪನಿ ದೇಶವನ್ನು ಲೂಟಿ ಮಾಡಿತ್ತು. ಈಗ ಭಾರತ ಎಂಬ ಹೆಸರನ್ನು ಬದಲಿಸಿ ದೇಶವನ್ನು ಲೂಟಿ ಮಾಡಲು ಯತ್ನಿಸುತ್ತಿದೆ. ಹಾಗಾಗಿ ಇಂಡಿಯಾ ಹೆಸರನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ದೇಶದ ಜನರು ಅವರನ್ನು ಕ್ಷಮಿಸುವುದಿಲ್ಲ. ಕೆಲವು ವರ್ಷಗಳ ಹಿಂದೆ, ಸ್ಪೆಷಲ್ 26 ಎಂಬ ಹೆಸರಿನೊಂದಿಗೆ ಚಲನಚಿತ್ರವೊಂದು ಬಿಡುಗಡೆಯಾಗಿತ್ತು. ವಿರೋಧ ಪಕ್ಷದ ನಾಯಕರು ದೇಶದಲ್ಲಿ ಅದನ್ನೇ ಪುನರಾವರ್ತಿಸಲು ಪ್ರಯತ್ನಿಸುತ್ತಿದ್ದಾರೆ.
ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಅವರು ಪಾಟ್ನಾಗೆ ಬೇಗನೆ ಮರಳಿದ್ದಕ್ಕಾಗಿ ಮದುವೆಗೂ ಮುನ್ನ ವರ ಮಂಟಪ ಬಿಟ್ಟು ಹೋದರೆ ಹೇಗೆ ಎಂದು ವ್ಯಂಗ್ಯವಾಡಿದರು. ಅಲ್ಲದೇ ದೇಶದ ಜನತೆ ಮತ್ತೊಮ್ಮೆ ನರೇಂದ್ರ ಮೋದಿಯವರಿಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.