ಹೈದರಾಬಾದ್:1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮಾರಣಹೋಮ ಮತ್ತು ಸಾಮೂಹಿಕ ವಲಸೆ ಕುರಿತು ನೈಜ ಘಟನೆಯಾಧರಿಸಿ ತೆರೆ ಕಂಡಿರುವ 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆದರೆ, ಕಾಂಗ್ರೆಸ್ ಸೇರಿದಂತೆ ಕೆಲ ಪಕ್ಷದ ಮುಖಂಡರುಗಳು ಟೀಕೆ ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಇದೀಗ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಕೂಡ ಸೇರಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಯಶವಂತ್ ಸಿನ್ಹಾ, ದಿ ಕಾಶ್ಮೀರಿ ಫೈಲ್ಸ್ ಚಿತ್ರ ವೀಕ್ಷಣೆ ಮಾಡದವರನ್ನು ಜೈಲಿಗೆ ಕಳುಹಿಸುವ ಕಾನೂನು ಜಾರಿಗೆ ತನ್ನಿ ಎಂದು ವ್ಯಂಗ್ಯವಾಡಿದ್ದಾರೆ. ಎಲ್ಲ ಭಾರತೀಯರು ಈ ಚಿತ್ರ ವೀಕ್ಷಣೆ ಮಾಡುವ ಕಾನೂನು ಸಂಸತ್ತಿನಲ್ಲಿ ಅಂಗೀಕಾರಗೊಳಿಸಬೇಕು. ಒಂದು ವೇಳೆ ಈ ಚಿತ್ರ ವೀಕ್ಷಣೆ ಮಾಡಲು ವಿಫಲವಾದರೆ ಎರಡು ವರ್ಷ ಜೈಲಿಗಟ್ಟುವ ಹಾಗೂ ಟೀಕಿಸುವವರ ವಿರುದ್ಧ ಜೀವನ ಪರ್ಯಂತ ಜೈಲಿನಲ್ಲಿಡುವ ಕಾಯ್ದೆ ತರಬೇಕು ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಟಿಎಂಸಿ ನಾಯಕ ಯಶವಂತ್ ಸಿನ್ಹಾ, ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಭಾರತದಾದ್ಯಂತ ತೆರಿಗೆ ವಿನಾಯಿತಿ ನೀಡಿದರೆ ಮಾತ್ರ ಸಾಕಾಗುವುದಿಲ್ಲ ಎಂದು ವ್ಯಂಗ್ಯಭರಿತ ಪೋಸ್ಟರ್ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ:ಲಂಚ ಕೇಳಿದ್ರೆ ನೀಡಿ, ಆದರೆ ವಿಡಿಯೋ ಮಾಡಿ ಸಿಎಂ WhatsApp ಸಂಖ್ಯೆಗೆ ಕಳುಹಿಸಿ: ಅರವಿಂದ್ ಕೇಜ್ರಿವಾಲ್
ವಿವೇಕ್ ರಂಜನ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರಕ್ಕೆ ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಗೋವಾ, ರಾಜಸ್ಥಾನ, ಮಧ್ಯಪ್ರದೇಶ, ಕರ್ನಾಟಕ ಸೇರಿದಂತೆ 8ಕ್ಕೂ ಹೆಚ್ಚಿನ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ.
1990ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳು ನಡೆಸಿದ ಅತ್ಯಂತ ಘೋರ ದೌರ್ಜನ್ಯದ ವಿಷಯಗಳನ್ನಿಟ್ಟುಕೊಂಡು ಚಿತ್ರೀಕರಿಸಿರುವ 'ದಿ ಕಾಶ್ಮೀರಿ ಫೈಲ್ಸ್' ಚಿತ್ರಕ್ಕೆ ವಿಶ್ವಾದ್ಯಂತ ಪ್ರಶಂಸೆಯ ಸುರಿಮಳೆಯಾಗುತ್ತಿದೆ.